ತುಮಕೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ದಲಿತ ಮುಖಂಡರ ಒತ್ತಾಯ
ತುಮಕೂರು:ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸ್ಥಳೀಯರಾಗಿರುವ ಎ.ಡಿ.ನರಸಿಂಹರಾಜು ಅವರಿಗೆ ಟಿಕೇಟ್ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷ ಹಾಗೂ ವಕೀಲ ರಜಿನಿಕಾಂತ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ ೨೦೦೮ರಿಂದಲೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಿಲ್ಲ.ಸಂಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದೆ.ಕಾರಣ ಸ್ಥಳೀಯರಲ್ಲದ ವ್ಯಕ್ತಿಗಳಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಟಿಕೇಟ್ ನೀಡುವುದರಿಂದ ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವವರ ಸಂಖ್ಯೆ ಕುಸಿದಿದೆ.ಹಾಗಾಗಿ ಪಕ್ಷ ಈ ಬಾರಿ ಸ್ಥಳೀಯರನ್ನು ಅಭ್ಯರ್ಥಿಯನ್ನಾಗಿಸಿದರೆ ಹೆಚ್ಚಿನ ಅನುಕೂಲ ವಾಗಲಿದೆ.ಇದರಿಂದ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಸಹ ಸಧೃಡವಾಗಲಿದೆ.ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಆಲೋಚಿಸಬೇಕೆಂದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜಾತಿಗಳ ಸುಮಾರು ೬೫-೭೦ ಸಾವಿರ ಮತದಾರರಿದ್ದಾರೆ.ಅಲ್ಲದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ೨೫ಸಾವಿರಕ್ಕೂ ಅಧಿಕ ಮತಗಳಿವೆ, ಹಿಂದುಳಿದ ವರ್ಗಗಳ ಸಮುದಾಯದ ಮತಗಳು ಸೇರಿದರೆ ದಲಿತ,ಅಲ್ಪಸಂಖ್ಯಾತ,ಓಬಿಸಿ ಮತಗಳೇ ಒಂದು ಲಕ್ಷ ದಾಟಲಿದೆ.ಇವುಗಳನ್ನು ಸಂಘಟಿಸುವಂತಹ ಸ್ಥಳೀಯ ನಾಯಕರ ಕೊರತೆ ಎದ್ದು ಕಾಣುತ್ತಿದೆ.ಸ್ಥಳೀಯರಲ್ಲದವರಿಗೆ ಟಿಕೇಟ್ ನೀಡುವುದರಿಂದ ಚುನಾವಣೆ ನಂತರ ಅವರು ಇತ್ತ ತಿರುಗಿಯೂ ನೋಡುವುದಿಲ್ಲ. ಮತ್ತೆ ಚುನಾವಣೆ ಸಂದರ್ಭದಲ್ಲಿ ಇನ್ಯಾರೋ ಟಿಕೇಟ್ ಪಡೆದು ಸ್ಪರ್ಧಿಸುವುದರಿಂದ ಅಭ್ಯರ್ಥಿಯ ಪರಿಚಯವೇ ಸ್ವತಃ ಪಕ್ಷದ ಕಾರ್ಯಕರ್ತರಿಗೆ ಇರುವುದಿಲ್ಲ.ಹಾಗಾಗಿ ಸ್ಥಳೀಯರಾಗಿ ಗುರುತಿಸಿಕೊಂಡಿರುವ, ಕಳೆದ ೨೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಎನ್.ಎಸ್.ಯು.ಐ, ಯುವ ಕಾಂಗ್ರೆಸ್‌ನ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಪರಿಚಿತರಿರುವ ಎ.ಡಿ.ನರಸಿಂಹರಾಜು ಅವರಿಗೆ ಟಿಕೇಟ್ ನೀಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬುದು ನಮ್ಮಗಳ ಅಭಿಪ್ರಾಯವಾಗಿದೆ ಎಂದು ರಜಿನಿಕಾಂತ್ ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿರುವ ಎ.ಡಿ.ನರಸಿಂಹರಾಜು ಅವರು, ಎಂ.ಟೇಕ್ ಪದವಿಧರರಾಗಿದ್ದು,ಒಂದು ಲಕ್ಷಕ್ಕೂ ಮೇಲ್ಪಟ್ಟ ವೇತನದ ಕೆಲಸವನ್ನು ಬದಿಗೊತ್ತಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಜನಸೇವೆ ಮಾಡುತ್ತಿದ್ದಾರೆ. ಕೋವಿಡ್ ನಂತಹ ಸಂದರ್ಭದಲ್ಲಿಯೂ ಗ್ರಾಮೀಣ ಭಾಗದಲ್ಲಿ ಅಗತ್ಯವಿರುವ ಜನರಿಗೆ ಸುಮಾರು ೪೫ ದಿನಗಳಿಗೂ ಹೆಚ್ಚು ಕಾಲ ಆಹಾರ, ನೀರು ವಿತರಿಸಿ ಅಸಹಾಯಕರಿಗೆ ನೆರವಾಗಿದ್ದಾರೆ.ಇವರಿಗೆ ಟಿಕೇಟ್ ನೀಡದರೆ ಹಾಲಿ, ಮಾಜಿಗಳ ಕಿತ್ತಾಟದಲ್ಲಿ ಸೌಮ್ಯ ಮತ್ತು ಸಜ್ಜನರಾಗಿರುವ ಎ.ಡಿ.ನರಸಿಂಹಮೂರ್ತಿ ಅವರ ಗೆಲುವು ಸಾಧ್ಯವಿದೆ ಎಂಬುದು ನಮ್ಮ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಬೇಕೆಂದು ರಜನಿಕಾಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರಾದ ಹಬ್ಬತ್ತನಹಳ್ಳಿ ಶ್ರೀನಿವಾಸ್,ಗುರುಪ್ರಸಾದ್, ಪಾಂಡರಂಗಯ್ಯ, ಎನ್.ಕೆ.ನಿಧಿಕುಮಾರ್, ಲಕ್ಷ್ಮಿದೇವಮ್ಮ, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.