ಕೋವಿಡ್ ಲಸಿಕೆ ನೀಡಿಕೆ: ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲಿದೆ ಗೊತ್ತೇ?
ಹೊಸದಿಲ್ಲಿ, ಸೆ.5: ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಕೋವಿಡ್-19 ವಿರುದ್ಧದ ಲಸಿಕಾ ಅಭಿಯಾನಕ್ಕೆ ವೇಗ ಸಿಕ್ಕಿದೆ. ಆದರೂ ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. 5 ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿರುವ 29 ದೇಶಗಳ ಪೈಕಿ ಭಾರತ 14ನೇ ಸ್ಥಾನದಲ್ಲಿದೆ. ಪ್ರತಿ 100 ಮಂದಿಯ ಪೈಕಿ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ ಎಂಬ ಆಧಾರದಲ್ಲಿ ಈ ರ‍್ಯಾಂಕಿಂಗ್ ನೀಡಲಾಗಿದೆ.
ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡ ಶೇಕಡಾವಾರು ಜನಸಂಖ್ಯೆಯನ್ನು ಪರಿಗಣಿಸಿದರೆ ಭಾರತ 17ನೇ ಸ್ಥಾನದಲ್ಲಿದೆ. ಎರಡೂ ಪರಿಗಣನೆಯಲ್ಲಿ ಇರಾನ್ ಹಾಗೂ ದಕ್ಷಿಣ ಆಫ್ರಿಕಾ ಹೊರತುಪಡಿಸಿದರೆ ಭಾರತಕ್ಕಿಂತ ಕಡಿಮೆ ಮಟ್ಟದ ಲಸಿಕೆ ಸಾಧನೆ ಮಾಡಿದ ದೇಶಗಳು ಕೋವಿಡ್-19 ಸೋಂಕಿನಿಂದ ಅಷ್ಟೊಂದು ಬಾಧಿತವಾಗಿರಲಿಲ್ಲ ಎನ್ನುವುದು ಗಮನಾರ್ಹ.
ಜಾಗತಿಕ ಮಟ್ಟದಲ್ಲಿ ಪ್ರತಿ 100 ಮಂದಿಗೆ 68.4 ಡೋಸ್‌ಗಳನ್ನು ನೀಡಲಾಗಿದ್ದರೆ, ದೇಶದ ಮುಂಚೂಣಿ ಲಸಿಕೆ ಉತ್ಪಾದನಾ ದೇಶವಾದ ಭಾರತದಲ್ಲಿ ಈ ಪ್ರಮಾಣ ಕೇವಲ 47.5ರಷ್ಟು. ಚೀನಾ ಹಾಗೂ ಬ್ರಿಟನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇತರ ಯೂರೋಪಿಯನ್ ದೇಶಗಳ ಜತೆಗೆ ಬ್ರೆಝಿಲ್, ಕೊಲಂಬಿಯಾ ಮತ್ತು ಮೆಕ್ಸಿಕೋದಂಥ ಅಭಿವೃದ್ಧಿಶೀಲ ದೇಶಗಳು ಕೂಡಾ ಉತ್ತಮ ಸಾಧನೆ ಮಾಡಿವೆ. ಪ್ರತಿ 100 ಮಂದಿಗೆ ನೀಡಲಾದ ಲಸಿಕೆ ಡೋಸ್‌ಗಳ ಲೆಕ್ಕಾಚಾರದಲ್ಲಿ ಭಾರತ ಅಗ್ರ 30 ದೇಶಗಳ ಪಟ್ಟಿಯಲ್ಲಿದೆ.
ಪ್ರತಿ 100 ಮಂದಿಗೆ ಎರಡೂ ಡೋಸ್ ನೀಡಲಾದ ದೇಶಗಳ ಪೈಕಿ ಭಾರತ 16ನೇ ಸ್ಥಾನದಲ್ಲಿದ್ದು, ಜೂನ್ ಮಧ್ಯದ ಬಳಿಕ ಫಿಲಿಫೀನ್ಸ್ ಹಾಗೂ ಥಾಯ್ಲೆಂಡ್ ಭಾರತವನ್ನು ಹಿಂದಿಕ್ಕಿವೆ.