ನಿಯಮಗಳಿಗೆ ಕೇಂದ್ರದ ತಿದ್ದುಪಡಿ: ಕೋವಿಡ್‌ ನಿಂದ ಮೃತರ ಕುಟುಂಬಗಳಿಗೆ 50,000 ರೂ.ಪರಿಹಾರ

ನಿಯಮಗಳಿಗೆ ಕೇಂದ್ರದ ತಿದ್ದುಪಡಿ: ಕೋವಿಡ್‌ ನಿಂದ ಮೃತರ ಕುಟುಂಬಗಳಿಗೆ 50,000 ರೂ.ಪರಿಹಾರ

ಹೊಸದಿಲ್ಲಿ: ಕೋವಿಡ್-19 ಬಲಿಪಶುಗಳಿಗೆ ಪರಿಹಾರ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ(ಎಸ್ಆರ್ಡಿಎಫ್)ಯಡಿ ನೆರವಿಗೆ ನಿಯಮಗಳನ್ನು ಕೇಂದ್ರವು ತಿದ್ದುಪಡಿಗೊಳಿಸಿದ್ದು,ಕೋವಿಡ್ನಿಂದ ಮೃತರ ಕುಟುಂಬಗಳಿಗೆ 50,000 ರೂ.ಗಳ ಪರಿಹಾರವನ್ನೊದಗಿಸಲು ರಾಜ್ಯಗಳಿಗೆ ಸಾಧ್ಯವಾಗಲಿದೆ.

 

ಈ ಉದ್ದೇಶಕ್ಕಾಗಿ ಎಸ್ಆರ್ಡಿಎಫ್ನಲ್ಲಿ ಕೇಂದ್ರದ ಪಾಲಿನ ಎರಡನೇ ಕಂತಿನ ಮೊತ್ತವಾಗಿ 23 ರಾಜ್ಯಗಳಿಗೆ 7,400 ಕೋ.ರೂ.ಗೂ ಹೆಚ್ಚಿನ ಹಣದ ಮುಂಗಡ ಬಿಡುಗಡೆಗೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ ಎಂದು ಗೃಹ ಸಚಿವಾಲಯವು ಶುಕ್ರವಾರ ತಿಳಿಸಿದೆ.

 

ಕೇಂದ್ರದ ಈ ಕ್ರಮದಿಂದಾಗಿ ರಾಜ್ಯ ಸರಕಾರಗಳು ತಮ್ಮ ಎಸ್ಆರ್ಡಿಎಫ್ನಲ್ಲಿ ಸಾಕಷ್ಟು ಹಣವನ್ನು ಹೊಂದಿರಲು ನೆರವಾಗುತ್ತದೆ. ಈಗಾಗಲೇ 1,599.20 ಕೋ.ರೂ.ಗಳನ್ನು ಐದು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯವು ಹೇಳಿದೆ.

 

ಇದರೊಂದಿಗೆ ಕೋವಿಡ್ನಿಂದ ಮೃತರ ಕುಟುಂಬಗಳಿಗೆ ಮತ್ತು ಇತರ ಅಧಿಸೂಚಿತ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು ತಮ್ಮ ಎಸ್ಡಿಆರ್ಎಫ್ಗಳಲ್ಲಿ ಆರಂಭಿಕ ಶಿಲ್ಕಿನ ಜೊತೆಗೆ ತಮ್ಮ ಪಾಲೂ ಸೇರಿದಂತೆ 2021-22ನೇ ಸಾಲಿನಲ್ಲಿ 23,186.40 ಕೋ.ರೂ.ಗಳನ್ನು ರಾಜ್ಯ ಸರಕಾರಗಳು ಹೊಂದಿರಲಿವೆ ಎಂದು ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

 

ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ನಾಲ್ಕು ಲ.ರೂ.ಗಳ ಪರಿಹಾರವನ್ನು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಸೆ.22ರಂದು ಸಲ್ಲಿಸಿದ್ದ ಉತ್ತರದಲ್ಲಿ ಕೇಂದ್ರವು,ಅಂತಹ ಕುಟುಂಬಗಳು ರಾಜ್ಯ ಸರಕಾರದಿಂದ 50,000 ರೂ.ಗಳ ಪರಿಹಾರವನ್ನು ಪಡೆಯಲಿವೆ ಮತ್ತು ಭವಿಷ್ಯದಲ್ಲಿ ಸಂಭವಿಸುವ ಸಾವುಗಳಿಗೂ ಪರಿಹಾರವನ್ನು ನೀಡಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

Leave a Reply

Your email address will not be published. Required fields are marked *

You cannot copy content of this page

error: Content is protected !!