ತುಮಕೂರು ನಗರದ ರೇಣುಕಾ ವಿದ್ಯಾಪೀಠ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಂಕಿತರೊಂದಿಗೆ ಮಾತನಾಡಿ ಮಾನಸಿಕವಾಗಿ ಸ್ಥೈರ್ಯ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಅವರು ನಗರದ ವೀರಶೈವ ಸೇವಾ ಸಮಾಜದ ಆಶ್ರಯದಲ್ಲಿಮಾಜಿ ಸಚಿವ ಸೊಗಡು ಶಿವಣ್ಣನವರ ನೇತೃತ್ವದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಅವರು ಅಲ್ಲಿನ ಚಿಕಿತ್ಸಾ ಕ್ರಮ ಮತ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಿ ಸೋಂಕು ಆಕಸ್ಮಿಕವಾಗಿ ತಗುಲಿದ್ದು ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದೀರಿ.ಇಲ್ಲಿ ಉತ್ತಮವಾಗಿ ಚಿಕಿತ್ಸೆ ದೊರೆಯುತ್ತಿದ್ದು, ಯಾವುದೇ ಕಾರಣಕ್ಕೂ ಯಾರೂ ಸಹ ಭಯಪಡುವ ಅವಶ್ಯಕತೆಯಿಲ್ಲ. ಮಾನಸಿಕವಾಗಿ ಸದೃಢರಾಗಿ ವೈದ್ಯರು ನೀಡುವ ಔಷಧಿಯನ್ನು ಪಡೆದರೆ ಕೊರೋನಾ ಸೋಂಕು ನಿಜವಾಗಿಯೂ ತಮ್ಮಿಂದ ದೂರವಾಗುತ್ತದೆ. ಈ ಸೋಂಕಿಗೆ ಚಿಕಿತ್ಸೆಯ ಜೊತೆಗೆ ಮಾನಸಿಕ ಸ್ಥೈರ್ಯ ಕೂಡ ಅತ್ಯವಶ್ಯಕವಾಗಿದ್ದು ಯಾರು ಮಾನಸಿಕವಾಗಿ ದೃಢರಾಗಿರುತ್ತಾರೋ ಅವರು ಬೇಗ ಗುಣಮುಖರಾಗುತ್ತಾರೆ ಎಂದರು.
ಈಗಾಗಲೇ ಜಿಲ್ಲಾಡಳಿತ ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಫಲವಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಈ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗೇ ತೀರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಾಜಿ ಸಚಿವರಾದ ಸೊಗಡು ಶಿವಣ್ಣ, ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್ ಮತ್ತಿತರರು ಸೇವಾ ಮನೋಭಾವದ ಉದ್ದೇಶದಿಂದ ಇಲ್ಲಿ ಕೋವಿಡ್ ಕೇರ್ ಸೆಂಟರ್ ತರೆಯುವ ಬಗ್ಗೆ ತಮ್ಮಲ್ಲಿ ಚರ್ಚಿಸಿದರು. ಅಂದು ಇಲ್ಲಿಗೆ ಭೇಟಿ ನೀಡಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಅನುಮತಿ ನೀಡಲಾಯಿತು. ಅದರ ಪರಿಣಾಮ ಇಂದು ನೂರಾರು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ನಂತರ ಅವರು ವೀರಶೈವ ಕಲ್ಯಾಣ ಮಂದಿರಕ್ಕೆ ಭೇಟಿನೀಡಿದ ಅವರು ಅಲ್ಲಿ ರೇಣುಕಾ ವಿದ್ಯಾಪೀಠ ಕೋವಿಡ್ ಕೇರ್ ಸೆಂಟರ್ ಗಾಗಿ ಅವಿರತವಾಗಿ ಶ್ರಮಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಲವು ಕಖಟಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಗಾರ್ಮೆಂಟ್ಸ್ ನೌಕರರಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸುವಂತೆ ಗಾರ್ಮೆಂಟ್ಸ್ ಮಾಲೀಕರಿಗೆ ಸೂಚನೆ ನೀಡಿದ್ದು, ಇದರ ಫಲವಾಗಿ ಟಿ.ವಿ.ಎಸ್. ಕಂಪೆನಿ ತನ್ನ ನೌಕರರಿಗೆ ಲಸಿಕೆ ಹಾಕಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಚಂದ್ರಮೌಳಿ, ಅತ್ತಿರೇಣುಕಾನಂದ, ಮುಂತಾದವರು ಉಪಸ್ಥಿತರಿದ್ದರು.