ತುಮಕೂರು ಜಿಲ್ಲೆಯ ಎಲ್ಲಾ ಫಾರ್ಮಸಿಸ್ಟ್‌ಗಳನ್ನು ಕೊರೋನಾ ವಾರಿಯರ್ಸ್‌ಗಳೆಂದು ಪರಿಗಣಿಸಿ, ಅವರೆಲ್ಲರಿಗೂ ತುರ್ತಾಗಿ ಕರೋನಾ ಲಸಿಕೆ ನೀಡಿ
ಕೊರೋನ ಎಂಬ ಮಹಾಮಾರಿಯ ಅಟ್ಟಹಾಸದಿಂದ ಇಡಿ ವಿಶ್ವವೇ ನಲುಗಿ ಹೋಗಿತ್ತು. ಇದೇ ವೇಳೆ ಸರ್ಕಾರ ಕೂಡ ಜನಸಾಮಾನ್ಯರು ಊಹಿಸಲು ಅಸಾಧ್ಯವಾದಂತಹ ಕಠಿಣ ಕಾನೂನುಗಳನ್ನು ಜಾರಿಗೊಳಿಸಿತ್ತು. ಕಾರಣವಿಲ್ಲದೆ, ಮಾಸ್ಕ್ ಧರಿಸದೆ ಜನಸಾಮಾನ್ಯರು ತಮ್ಮ ಮನೆಗಳಿಂದ ಹೊರ ಹೋಗುವ ಹಾಗಿರಲಿಲ್ಲ. ಸರಿಯಾದ ಕಾರಣವಿಲ್ಲದೆ ಅನುಮತಿ ಪತ್ರಗಳಿಲ್ಲದೆ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದವರಿಗೆ ಪೊಲೀಸರು ತಮ್ಮ ಬೆತ್ತದ ರುಚಿಯನ್ನು ತೋರಿಸದೆ ಬಿಡುತ್ತಿರಲಿಲ್ಲ. ಇಡೀ ಜಗತ್ತೇ ಒಂದು ರೀತಿ ಸ್ತಬ್ಧವಾದಂತೆ ಭಾಸವಾಗುತ್ತಿತ್ತು.
ಪ್ರತಿಯೊಬ್ಬರ ಮನೆಗಳಲ್ಲಿ ಬಿ.ಪಿ, ಶುಗರ್, ಹೃದಯ ಖಾಯಿಲೆ, ಥೈರಾಯ್ಡ್ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಔಷಧಗಳ ಮೇಲೆ ಅವಲಂಭಿತರಾಗಿದ್ದರು. ಈ ಲಾಕ್‌ಡೌನ್‌ಗೆ ಸಂಬಂಧಿಸಿದ ನೀತಿ-ನಿಯಮಗಳು ಇಂಥಹವರ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಿ ಮುಂದೇನು ಎಂಬುದಾಗಿ ದಿಗ್ಭ್ರಾಂತರಾಗಿ ಇರುವಾಗ, ಮರುಭೂಮಿಯಲ್ಲಿ ನೀರು ದೊರೆತಂತೆ ಸಾರ್ವಜನಿಕರ ನೆರವಿಗೆ ನಿಂತವರುಗಳೇ ಔಷಧ ಮಳಿಗೆಯ ಮಾಲೀಕರು ಮತ್ತು ವಿತರಕರು. ಲಾಕ್‌ಡೌನ್ ಪ್ರಾರಂಭವಾದ ಬೆರಳೆಣಿಕೆ ದಿನಗಳಲ್ಲಿ ಖಾಸಗಿ ಪರಿಪಾಠ ಮಾಡುತ್ತಿದ್ದ ವೈದ್ಯರುಗಳು ಕೂಡ ತಮ್ಮ ಕ್ಲಿನಿಕ್‌ಗಳಿಗೆ ಬೀಗ ಜಡಿದು ತಮ್ಮ ಕುಟುಂಬಸ್ಥರ ಜೊತೆಗೆ ಸುರಕ್ಷಿತವಾಗಿರುವ ವೇಳೆ, ಸಾಮಾಜಿಕ ಕಳಕಳಿ ಹಾಗೂ ವೃತ್ತಿ ನಿಷ್ಠೆಯನ್ನು ಬಿಡದ ನಮ್ಮ ಫಾರ್ಮಸಿಸ್ಟ್‌ಗಳು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸೇವೆ ಸಲ್ಲಿಸಿದ್ದಾರೆ. ಲಾಕ್‌ಡೌನ್‌ನ ಪ್ರಾರಂಭಿಕ ಹಂತದಲ್ಲಿ ತಮ್ಮ ಔಷಧ ಮಳಿಗೆಗಳನ್ನು ತೆರೆಯಲು ರಸ್ತೆಗಳಲ್ಲಿ ಬರುವಾಗ ಸಾಕಷ್ಟು ಬಾರಿ ನಾವು ಔಷಧ ಮಳಿಗೆ ಮಾಲೀಕರು ಎಂಬುದನ್ನು ಪೊಲೀಸರಿಗೆ ರುಜುವಾತು ಮಾಡುವಷ್ಟರಲ್ಲಿ ಬೆತ್ತದ ರುಚಿಯನ್ನು ತಿಂದಿರುವುದೂ ಉಂಟು.
ತಮ್ಮ ಬಗ್ಗೆ ಆತಂಕ ಪಡುತ್ತಿದ್ದ ಕುಟುಂಬಸ್ಥರಿಗೆ ತಾವೇ ಆತ್ಮಸ್ಥೈರ್ಯವನ್ನು ತುಂಬಿ, ಪ್ರತಿದಿನ ತಮ್ಮ ಮಳಿಗೆಗೆ ಔಷಧ ಖರೀದಿಗೆ ಬರುತ್ತಿದ್ದವರಲ್ಲಿ ಜಾಗೃತಿ ಮೂಡಿಸುತ್ತಾ, ಅವರ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಕಲೆಹಾಕಿ ಅನುಮಾನಾಸ್ಪದ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಔಷಧ ಇಲಾಖೆಯ ಮುಖೇನ ಸರ್ಕಾರಕ್ಕೆ ನೀಡಿ ಸಹಕರಿಸುವುದರ ಜೊತೆಗೆ ಕೆಲ ಸಂದರ್ಭಗಳಲ್ಲಿ ಮನೆಯ ಬಾಗಿಲುಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಔಷಧಗಳನ್ನು ತಲುಪಿಸುತ್ತಾ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದಿರುತ್ತಾರೆ.
ಕೊರೋನಾ ಸಂದರ್ಭದಲ್ಲಿ ಹೋರಾಡಿದಂತಹ ವೈದ್ಯರುಗಳಿಗೆ, ದಾದಿಯರಿಗೆ, ಆಶಾ ಕಾರ್ಯಕರ್ತರಿಗೆ, ಪೌರಕಾರ್ಮಿಕರುಗಳಿಗೆ, ಪೊಲೀಸ್ ಇಲಾಖೆ ಹೀಗೆ ಹತ್ತಾರು ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ಸನ್ಮಾನ ಹಾಗೂ ಒಂದಷ್ಟು ಸೌಲಭ್ಯಗಳು ಸಿಕ್ಕಿವೆ, ಸಿಗುತ್ತಿವೆ. ಆದರೆ ಅದೇ ಜನರ ಜೀವ ಉಳಿಸಲು ಅಗತ್ಯವಾಗಿ ಬೇಕಾದ ಔಷಧಿಗಳನ್ನು ಒದಗಿಸಿದ ಫಾರ್ಮಸಿಸ್ಟ್‌ಗಳಿಗೆ ದೊರೆತ್ತದಾದರೂ ಏನು? ಏನೇನು ಇಲ್ಲ ಒಂದು ವೇಳೆ ಜನಸಾಮಾನ್ಯರಂತೆ ಔಷಧ ವಿತರಕರು, ತಮ್ಮ ಜೀವದ ಬಗ್ಗೆ ಚಿಂತಿಸಿ, ಔಷಧ ಮಳಿಗೆ ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಸಾಮಾಜಿಕ ಕಳಕಳಿ ಮರೆತು ಕೂತಿದ್ದರೆ, ಕೊರೋನಾದಿಂದ ಹಾನಿಯಾದ ನೂರುಪಟ್ಟು ಸಾವು-ನೋವುಗಳು ಹೆಚ್ಚಾಗುತ್ತಿದ್ದವು. ಸಾರ್ವಜನಿಕರ ಜೀವ ರಕ್ಷಣೆಗೆ ನಿಂತ ಕಾರಣ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ನಮಗೆ ತಿಳಿದು ಬಂದಿರುವಂತೆ ೯ ಜನ ಫಾರ್ಮಸಿಸ್ಟ್‌ಗಳು ಈ ಕಾರೋನಾ ರೋಗಕ್ಕೆ ಬಲಿಯಾಗಿದ್ದಾರೆ. ಯಾವುದೇ ಸವಲತ್ತುಗಳು ಈ ಫಾರ್ಮಸಿಸ್ಟ್ ಕುಟುಂಬಗಳಿಗೆ ಸಿಗದ ಕಾರಣ, ಆ ಕುಟುಂಬಗಳು ಬೀದಿಗೆ ಬಂದಿವೆ. ಆದ ಕಾರಣ ಇನ್ನು ಮುಂದಾದರೂ ಫಾರ್ಮಸಿಸ್ಟ್‌ಗಳನ್ನು ಕರೋನಾ ವಾರಿಯರ್ಸ್‌ಗಳು ಎಂಬುದಾಗಿ ಗುರುತಿಸಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಸಾವು-ನೋವುಗಳನ್ನು ತಪ್ಪಿಸುವುದರ ಜೊತೆಗೆ, ರಾಜ್ಯಾದ್ಯಂತ ಇರುವ ಎಲ್ಲಾ ಔಷಧ ಮಳಿಗೆ ಮಾಲೀಕರು ಮತ್ತು ವಿತರಕರಿಗೆ ಕರೋನಾ ವ್ಯಾಕ್ಸಿನ್ ನೀಡುವಂತೆ ಸರ್ಕಾರ ಗಮನಹರಿಸಬೇಕಗಿದೆ.
ತಾವುಗಳು ಈ ವಿಚಾರದ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಸುದ್ಧಿಯನ್ನು ತಮ್ಮ ಪತ್ರಿಕೆ / ಮಾದ್ಯಮದಲ್ಲಿ ಪ್ರಸಾರ ಮಾಡುವುದರೊಂದಿಗೆ ಫಾರ್ಮಸಿಸ್ಟ್‌ಗಳಿಗೆ ಸಹಕಾರಿಯಾಗಬೇಕೆಂದು ಕೋರಿದೆ.