ಬಿಜೆಪಿ ಸರ್ಕಾರದಿಂದ 40% ಕಮಿಷನ್ ವಿಚಾರ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವೂ ತನಿಖೆಯಾಗಲಿ ಎಂದು ಎಂಎಲ್ಸಿ ರಾಜೇಂದ್ರ ಒತ್ತಾಯ.
ತುಮಕೂರು: ಸರ್ಕಾರದಿಂದ 40% ಕಮಿಷನ್ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವೂ ತನಿಖೆಯಾಗಲಿ ಎಂದು ಎಂಎಲ್ಸಿ ರಾಜೇಂದ್ರ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ಇದುವರೆಗೂ ಕಂಡು ಕೇಳದಂಥ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇತ್ತೀಚೆಗೆ ಕಂಟ್ರಾಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ನಡೆಯುತ್ತಿದೆ ಎನ್ನುವುದರ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ ಎಂದರು.
40% ಕಮಿಷನ್ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಈಶ್ವರಪ್ಪ ಅವರು ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ತನ್ನ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಹಸ್ತಕ್ಷೇಪ ಆಗ್ತಿದೆ ಎಂದು ಪತ್ರ ಬರೆದಿದ್ದರು. 1,200 ಕೋಟಿ ರೂಪಾಯಿಯ ಕಾಮಗಾರಿಯನ್ನ ತಮ್ಮ ಗಮನಕ್ಕೆ ಬಾರದೇ ಟೆಂಡರ್ ನೀಡಿದ್ದಾರೆ ಎಂದು ಪತ್ರ ಬರೆದಿದ್ದರು. ಒಬ್ಬರು ಸಚಿವರೇ ಸಿಎಂ ವಿರುದ್ದ ಆರೋಪ ಮಾಡಿದಾಗ ಅವರ ವಿರುದ್ದ ತನಿಖೆ ನಡೆಯಬೇಕಲ್ವೇ? ಎಂದರು.
ಮಂಗಳೂರು ಹಿಜಾಬ್ ಪ್ರಕರಣದ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪಿಗೆ ತಲೆಬಾಗಬೇಕು. ಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನ ಪಾಲನೆ ಮಾಡಬೇಕು ಎಂದರು.