ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಶ್ಲೋಕಗಳ ಪಠಣ
ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ವಿಧಿವಶರಾಗಿದ್ದಾರೆ. ಪಾರ್ಥಿವ ಶರೀರದ ಮುಂದೆ ಹಿಂದೂ ಕ್ರೈಸ್ತ ಮುಸಲ್ಮಾನ ಮೂರು ಧರ್ಮದ ಪವಿತ್ರ ಗ್ರಂಥಗಳು ಶ್ಲೋಕಗಳ ಪಠಣ ಮಾಡಲಾಗಿದೆ. ಈ ಮೂಲಕ ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ.
ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರವನ್ನು ಇರಿಸಿ ಉಡುಪಿಯ ಕಾಂಗ್ರೆಸ್ ಅಂತಿಮ ನಮನ ಸಲ್ಲಿಸಲಾಗಿತ್ತು. ಮುಸಲ್ಮಾನ ಧರ್ಮಗುರುಗಳು ಖರಾನ್ ಸಂದೇಶಗಳನ್ನು ವೇದಿಕೆಯಲ್ಲಿ ಬೋಧಿಸಿದ್ದರು. ಸಾಮಾಜಿಕ ರಾಜಕೀಯ ಚಟುವಟಿಕೆ ಮಾಡುವ ಮೂಲಕ ಎಲ್ಲಾ ವರ್ಗದವರಿಗೆ ಆಸ್ಕರ್ ಸಹಾಯ ಮಾಡಿದ್ದನ್ನು ಸ್ಮರಿಸಲಾಗಿದೆ.
ಅಂತಿಮ ದರ್ಶನಕ್ಕೆ ಜನ ಬರುತ್ತಿದ್ದಂತೆ ಭಗವದ್ಗೀತೆಯ ಮಂತ್ರಪಠಣ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾಗಿದೆ. ಮರಣದ ನಂತರ ಆತ್ಮ ಭಗವಂತನಲ್ಲಿ ಐಕ್ಯ ಹೊಂದುವ ಕುರಿತಾದ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲಾಗಿದೆ. ಸಾಮೂಹಿಕ ಭಜನೆ ಕಾರ್ಯಕ್ರಮ ಕೂಡ ಈ ಸಂದರ್ಭದಲ್ಲಿ ನಡೆದಿದೆ
ಫಾದರ್ ವಿಲಿಯಂ ಮಾರ್ಟಿಸ್ ಬೈಬಲ್ ಗ್ರಂಥದ ಕೆಲವು ಶ್ಲೋಕಗಳನ್ನು ಪಠಣ ಮಾಡಿದರು. ಆಸ್ಕರ್ ಫೆರ್ನಾಂಡಿಸ್ ಅವರ ಕುಟುಂಬಕ್ಕೆ ನೋವು ಮರೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥನೆ ಮಾಡಲಾಗಿದೆ.
ಕ್ರೈಸ್ತ ಧರ್ಮದವರ ಆಗಿದ್ದರು ಆಸ್ಕರ್ ಫೆರ್ನಾಂಡಿಸ್ ಅತಿಹೆಚ್ಚು ಹಿಂದೂ, ಮುಸಲ್ಮಾನ ಗೆಳೆಯರು ಹಿತೈಷಿಗಳು ಇದ್ದರು. ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಜನೆಯನ್ನು ಏರ್ಪಡಿಸಲಾಗಿತ್ತು. ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದರೂ ಆಸ್ಕರ್ ಫೆರ್ನಾಂಡಿಸ್‍ಗೆ ಭಜನೆ ದೇವರನಾಮ ಸಂಕೀರ್ತನೆಗಳನ್ನು ಕೇಳುವುದು ಬಹಳ ಅಚ್ಚುಮೆಚ್ಚಿನದ್ದಾಗಿತ್ತು ಎಂದು ಆಸ್ಕರ್ ಆಪ್ತ ಗಫೂರ್ ಮಾಹಿತಿ ನೀಡಿದರು.
ಕಳೆದ ನಾಲ್ಕೈದು ವರ್ಷಗಳಿಂದ ಆಸ್ಕರ್ ಫೆರ್ನಾಂಡಿಸ್ ತೀವ್ರ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಮನೆಯಲ್ಲಿ ಸಂಗೀತ ಭಜನೆಗಳನ್ನು ಆಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮ ನಮನದ ಸಂದರ್ಭ ಕಾಂಗ್ರೆಸ್ ಕಚೇರಿಯಲ್ಲಿ ಭಜನೆಯನ್ನು ಏರ್ಪಡಿಸಲಾಗಿತ್ತು.