ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಸ್ಕ್ಯಾಮ್ಗಳಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ವಿಧಾನಸಭೆಯ ಅಧಿವೇಶನ ಮುಕ್ತಾಯವಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

 

ಅವರ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸಕ್ತವನ್ನೇ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ. ಒಂದು ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಈ ಪ್ರವೃತ್ತಿ ಬಹಳ ದಿನ ನಡೆಯುವುದಿಲ್ಲ. ಗುತ್ತಿಗೆದಾರರ ಸಂಘದ ವಿಷಯದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. ಒಂದು ವಿಚಾರವನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗುವುದು ಎಂದು ಕಾಂಗ್ರೆಸ್ ತಿಳಿದುಕೊಂಡಂತಿದೆ. ಆ ಕಾಲ ಹೋಗಿದೆ. ಜನಕ್ಕೆ ಸತ್ಯ ಏನೆಂದು ತಿಳಿದಿದೆ. ಒಂದು ವರ್ಷದ ಹಿಂದೆ ಸಂಘ ಪತ್ರ ಬರೆದಿದೆ. ಒಂದು ಸಣ್ಣ ದೂರು ದಾಖಲಿಸಿ ಅದಕ್ಕೆ ಸೂಕ್ತ ದಾಖಲೆಗಳನ್ನು ಕೊಡಬೇಕು. ಎಲ್ಲೆಲ್ಲಿ ಕೊಟ್ಟಿದ್ದೀರಿ, ಅಥವಾ ಎಲ್ಲಿ ಕೊಡಲು ಒತ್ತಡ ಬಂದಿತ್ತು, ಯಾವ ಇಲಾಖೆ, ಯಾರಿಗೆ, ಯಾರು ಮಾತನಾಡಿದ್ದರು ಎಂಬ ಬಗ್ಗೆ ಸಣ್ಣ ದೂರು ನೀಡಿದರೆ, ಅದರ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಹಾಗೂ ಲೋಕಾಯುಕ್ತಕ್ಕೆ ನೇರವಾಗಿ ಪ್ರಕರಣವನ್ನು ವಹಿಸಲಾಗುವುದು ಎಂದರು.

 

*ಚರ್ಚೆಗೆ ನಾವು ಸಿದ್ಧ*

‘ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಎಲ್ಲರೂ ಹೇಳಿದ್ದಾರೆ. ಹತ್ತು ಹಲವಾರು ಸ್ಲ್ಯಾಮ್ಗಳಿವೆ. ಅವರ ನಾಯಕರೇ ಮಾತನಾಡಿರುವುದು ಬೇಕಾದಷ್ಟಿದೆ. ಪಕ್ಷದ ಕಚೇರಿಯಲ್ಲಿ ಇಬ್ಬರು ಪದಾಧಿಕಾರಿಗಳು ಮಾತನಾಡಿದ್ದಾರೆ. ಅದು ಮಾಧ್ಯಮಗಳಲ್ಲಿ ಬಿತ್ತರವೂ ಆಗಿದೆ. ಅದಕ್ಕೆ ಉತ್ತರವಿಲ್ಲ. ರಮೇಶ್ ಕುಮಾರ್ ಅವರು ಮೂರು ತಲೆಮಾರಿಗಾಗುವಷ್ಟು ನಾವು ಋಣದಲ್ಲಿದ್ದೇವೆ. ಬೇಕಾದಷ್ಟು ಮಾಡಿಕೊಂಡಿದ್ದಾರೆ ಸ್ವಲ್ಪ ಕೊಡಬೇಕು ಎಂದು ಮೊನ್ನೆಯಷ್ಟೇ ಭಾಷಣ ಮಾಡಿದ್ದಾರೆ. ಅವರ ನಾಯಕರೇ ಮಾತನಾಡಿದ್ದಾರೆ. ಅವರಲ್ಲಿಯೇ ಬೇಕಾದಷ್ಟು ಚರ್ಚೆ ನಡೆಯುತ್ತಿದೆ. ಚರ್ಚೆ ಮಾಡಲು ತಯಾರಿಲ್ಲ ಎನ್ನುತ್ತಾರೆ. ಚರ್ಚೆಗೆ ನಾವು ಸಿದ್ಧ ಎಂದರು.

*ಹಿಟ್ ಅಂಡ್ ರನ್ ಸಲ್ಲದು*

ಚರ್ಚೆ ಮಾಡುವ ಮೂಲಕ ಅದೇನು ಸರಕಿದೆ ಹೊರಗೆ ಬರಬೇಕು. ಸುಮ್ಮನೆ ಹಿಟ್ ಅಂಡ್ ರನ್ ಮಾಡುವುದಲ್ಲ. 40% ಅಂದರೆ ಯಾರು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಬೇಕು. ನಾವು ಕೇಳೋಕ್ಕೆ ತಯಾರಿದ್ದೇವೆ. ಚರ್ಚೆಯಾಗಲಿ ಎಂದೇ ನಾವೂ ಸದನದಲ್ಲಿ ಕೂತಿದ್ದು. ಆದರೆ ಇಂದಿನ ಅವರ ಇಂದಿನ ವರ್ತನೆ ನೋಡಿದರೆ ಈ ವಿಷಯವನ್ನು ಮೊದಲೇ ತೆಗೆದುಕೊಳ್ಳಬಹುದಾಗಿತ್ತು. ಕೊನೆಗೆ ಯಾಕೆ ತೆಗೆದುಕೊಂಡರು? ಕಳೆದ ವಾರವೇ ತೆಗೆದುಕೊಳ್ಳಬಹುದಾಗಿತ್ತು. ವಿರೋಧಪಕ್ಷದ ನಾಯಕರು ಯಾವತ್ತಾದರೂ ತೆಗೆದುಕೊಳ್ಳಬಹುದು. ಅವರಿಗೆ ಅಧಿಕಾರವಿದೆ. ವಿರೋಧಪಕ್ಷದಲ್ಲಿಯೇ ಹೊಂದಾಣಿಕೆ ಇಲ್ಲ. ಅವರಿಗೆ ಇದರಲ್ಲಿ ಏನೂ ಇಲ್ಲ, ನಿರ್ದಿಷ್ಟ ಅರೋಪಗಳಿಲ್ಲ ಎಂದು ಗೊತ್ತಿದೆ ಎಂದು ತಿಳಿಸಿದರು.

*ಕಾಂಗ್ರೆಸ್ ಪ್ರಾಯೋಜಿತ ಗುತ್ತಿಗೆದಾರರ ಸಂಘ*

ಗುತ್ತಿಗೆದಾರರ ಸಂಘವು ಕಾಂಗ್ರೆಸ್ ಪ್ರಾಯೋಜಿತ ಸಂಘ. ಹೀಗಾಗಿ ಕಾಂಗ್ರೆಸ್ಸಿಗೆ ಇದರಲ್ಲಿ ಹುರುಳಿಲ್ಲ ಎಂದು ಗೊತ್ತಿದೆ. ಈ ವಿಚಾರದಲ್ಲಿ ನಾವು ಮುಕ್ತವಾಗಿದ್ದೇವೆ. ದೂರು ಬಂದರೆ ಖಂಡಿತ ತನಿಖೆಯನ್ನು ಮಾಡಿಸುತ್ತೇವೆ. ದಯವಿಟ್ಟು ದೂರು ಕೊಡಿ. ಒಬ್ಬ ಕೆಂಪಣ್ಣನವರು ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಆ ಸಂಘದ ಬಗ್ಗೆಯೇ ಬಹಳಷ್ಟು ಸಂಶಯಗಳಿವೆ. ಯಾವುದೇ ಆಧಾರವಿಲ್ಲದೇ ಕಳೆದ ಒಂದು ವರ್ಷದಿಂದ ಈ ರೀತಿ ರಾಜಕೀಯ ಹೇಳುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಒಂದು ಸಣ್ಣ ಚೀಟಿಯನ್ನೂ ಕೊಡದಿರುವಂಥವರು. ಇನ್ನೊಂದೆಡೆ, ಜಸ್ಟಿಸ್ ಕೆಂಪಣ್ಣ ಇದ್ದಾರೆ. ಅವರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ನ್ಯಾಯಾಂಗ ಆಯೋಗದ ಅಧ್ಯಕ್ಷರಾಗಿದ್ದರು. ಆಧಾರರಹಿತವಾಗಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಒಂದು ಕಡೆ, ಸನ್ಮಾನ್ಯ ಗೌರವಾನ್ವಿತ, ಜಸ್ಟೀಸ್ ಕೆಂಪಣ್ಣ ಇನ್ನೊಂದು ಕಡೆ. ಅವರು ಆಗಲೇ ವರದಿ ನೀಡಿದ್ದಾರೆ. ಇದರ ಬಗ್ಗೆ ಚರ್ಚೆಯಾಗಬೇಕು. ಕೆಂಪಣ್ಣ ಅವರು ತನಿಖೆ ಮಾಡಿ ವರದಿಯನ್ನು ನ್ಯಾಯಾಂಗ ಆಯೋಗಕ್ಕೆ ನೀಡಿದರು. ಅವರ ಬಗ್ಗೆ ನಮಗೆ ಕಳಕಳಿ, ಗೌರವ ಇದೆ. ಅದರ ಬಗ್ಗೆ ಚರ್ಚೆ ಮಾಡಬೇಕು. ನಾವು ಚರ್ಚೆಗೆ ಸಿದ್ಧ. ಆದರೆ ಏನೂ ಆಧಾರ ನೀಡಿಲ್ಲ. ಹೀಗಾಗಿ ಇವೆರಡರ ಮಧ್ಯೆ ವ್ಯತ್ಯಾಸ ಮುಂದಿನ ದಿನಗಳಲ್ಲಿ ಜನಗಳಿಗೆ ತಿಳಿಯಲಿದೆ. ಈಗಾಗಲೇ ಸಚಿವ ಮುನಿರತ್ನ ಅವರು ಪ್ರಕರಣ ದಾಖಲಿಸಿ ದಾಖಲೆ ಒದಗಿಸಲು ಹತ್ತು ದಿನ ಸಮಯ ನೀಡಿದರು. ನ್ಯಾಯಾಲಯದಿಂದ ನೋಟೀಸು ಜಾರಿಯಾದರೂ ಯಾವ ಆಧಾರವನ್ನೂ ನೀಡಿಲ್ಲ. ನಾವು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ. ನ್ಯಾಯಾಲಯಕ್ಕೆ ದಾಖಲೆ ಕೊಡಲಿ ನ್ಯಾಯಾಂಗ ತನಿಖೆಯಾಗಿರುವ ಬಗ್ಗೆ ತೀರ್ಮಾನ ಮಾಡಬೇಕು ಎಂದರು.

 

*ನಾಳೆಯಿಂದಲೇ ತನಿಖೆ*

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುಧಾರಣೆಗಳೇನು ಮಾಡಬಹುದು ಎಂಬ ಬಗ್ಗೆ ಪತ್ರ ನೀಡಿದ್ದರು. ಆ ಸುಧಾರಣೆಗಳಿಗೆ ಆದೇಶ ಮಾಡಲಾಗಿದೆ. ಆದರೆ ಅವರು ನಿರ್ದಿಷ್ಟ ಪ್ರಕರಣದ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡುತ್ತೇವೆ. ಲೋಕಾಯುಕ್ತ ಸಂಸ್ಥೆ ನ್ಯಾಯಾಂಗದವರೇ ಮುಖ್ಯಸ್ಥರು. ಅಲ್ಲಿಗೇ ಕೊಡಲಿ. ಅಲ್ಲಿ ತನಿಖೆ ನಾಳೆಯೇ ಪ್ರಾರಂಭವಾಗುತ್ತದೆ ಎಂದರು.

 

ವಿರೋಧಪಕ್ಷದವರಿಗೆ ತಿರುಗೇಟು

ಎರಡು ವಾರಗಳ ಕಾಲ ವಿಧಾನಸಭಾ ಅಧಿವೇಶನ ನಡೆದು ಹತ್ತು ಹಲವಾರು ವಿಚಾರಗಳ ಚರ್ಚೆಯಾಗಿವೆ. ನೂರಾರು ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ. ಪ್ರಮುಖವಾಗಿ ಪ್ರವಾಹದ ಪರಿಸ್ಥಿತಿಯನ್ನು ಎಲ್ಲಾ ಶಾಸಕರು ಕೂಲಂಕುಶವಾಗಿ ತಿಳಿಸಿ ನಾಲ್ಕು ದಿನಗಳ ಕಾಲ ಎರಡೂ ಸದನದಲ್ಲಿ ಚರ್ಚೆಯಾಗಿದೆ. ಇದಕ್ಕೆ ಕಂದಾಯ ಸಚಿವರು ಉತ್ತರ ನೀಡಿದ್ದು, ನಾನು ಬೆಂಗಳೂರಿನ ಬಗ್ಗೆ ಉತ್ತರ ನೀಡಿದ್ದೇನೆ. ಯಾವುದನ್ನು ಮಾಡುವ ಉದ್ದೇಶದಿಂದ ಮಾತನಾಡಿದ್ದೇವೆ ಅದನ್ನು ಕೂಡಲೇ ಕಾರ್ಯಗತ ಮಾಡಲು ಅಧಿಕಾರಿಗಳ ಸಭೆ ನಡೆಸಿ ಅನುಷ್ಠಾನಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

 

ರಾಜಕೀಯವಾಗಿ ಹಲವಾರು ವಿಚಾರಗಳನ್ನು ಎತ್ತಲಾಗಿದೆ. ಆದರೆ ವಿರೋಧಪಕ್ಷಗಳು ಎತ್ತಿರುವ ಪಿ.ಎಸ್.ಐ ನೇಮಕಾತಿ ಪ್ರಕರಣ ಹಾಗೂ ಮತ್ತಿತರ ವಿಚಾರಗಳು ಅವರಿಗೇ ತಿರುಗೇಟಾಗಿದೆ. ಈಗಾಗಲೇ ನಾವು ಏನು ಕ್ರಮಗಳನ್ನು ತೆಗೆದುಕೊಂಡಿದ್ದೇವೋ ಅದರ ಬಗ್ಗೆಯೇ ಚರ್ಚೆ ಮಾಡಿದರು. ಅದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹಿಂದೆ ಅವರ ಅವಧಿಯಲ್ಲಿ ಯಾವುದನ್ನು ಮಾಡಿರಲಿಲ್ಲವೋ ಆ ಬಗ್ಗೆ ನಮ್ಮ ಸರ್ಕಾರ ಕ್ರಮ ತೆಗೆದಕೊಂಡಿದೆ. ಪೊಲೀಸ್ ಪೇದೆ ನೇಮಕಾತಿಯಲ್ಲಿ ಡಿಐಜಿ ಶ್ರೀಧರನ್ ಅವರ ಮೇಲೆ ಸಿಐಡಿ ಅವರು ಎಫ್ ಐಆರ್ ಮಾಡಿ ತನಿಖೆ ಮಾಡಿದರೂ ಕೂಡ ಸರ್ಕಾರದ ಮಟ್ಟಕ್ಕೆ ಬಂದಾಗ ಕಾನೂನಿನ ಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಅಂದು ಅನುಮತಿ ನೀಡಿದ್ದರೆ, ಅವರೂ ಕೂಡ ಶಿಕ್ಷೆಗೆ ಒಳಪಡಬೇಕಿತ್ತು. ಅದನ್ನು ಮಾಡಲಿಲ್ಲ. ಈಗ ಅವರು ನಿವೃತ್ತಿ ಹೊಂದಿದ್ದಾರೆ. ಅವರು ಜಾಮೀನು ಪಡೆದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗ ನಾನು ಮುಖ್ಯಮಂತ್ರಿಯಾದ ಬಳಿಕ ಕಾನೂನಿನ ಕ್ರಮಕ್ಕೆ ಅನುಮತಿ ನೀಡಿದ್ದೇನೆ. ಅವರ ಆಡಳಿತ ವೈಖರಿ ಹೀಗಿದೆ. ಶಿಕ್ಷಕರ ನೇಮಕಾತಿ ಬಗ್ಗೆ ಈಗಾಗಲೇ ಸುಮಾರು ಜನರನ್ನು ಬಂಧಿಸಿ ತನಿಖೆ ನಡೆಯುತ್ತಿದೆ ಎಂದರು.

 

2006 ರಿಂದ ಈವರಗೆ ಎಲ್ಲಾ ಅಕ್ರಮ ಪ್ರಕರಣಗಳ ತನಿಖೆಯಾಗಲಿ ಎಂದು ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅವರ ಕಾಲದಲ್ಲಿ ಅವರೇ ಆದೇಶ ಮಾಡಿರುವ ಆಯೋಗದ ಮೇಲೆ ಅವರೇ ಕ್ರಮ ತೆಗೆದುಕೊಂಡಿಲ್ಲ. ಇದೆಲ್ಲಾ ಮೇಲ್ನೋಟದ ಮಾತುಗಳು ಎಂದರು.

 

ಸಚಿವ ಸಂಪುಟ ವಿಸ್ತರಣೆ

 

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಆದಷ್ಟೂ ಬೇಗನೇ ಮಾಡೋಣ ಎಂದು ಭರವಸೆ ನೀಡಿದ್ದಾರೆ. ಸದನ ಮುಕ್ತಾಯವಾಗಲು ಕಾಯುತ್ತಿದ್ದೆವು. ನನ್ನನ್ನು ಕರೆಸಿ ಮಾತನಾಡಿದರೆ, ಆದಷ್ಟೂ ಬೇಗನೇ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಈ ಬಗ್ಗೆ ವರಿಷ್ಠರ ಅನುಮತಿ ಪಡೆದು ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರುಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ವಿಧಾನಸೌಧದ ಹೊರ ಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!