ಝೀ ನ್ಯೂಸ್, ನಿರೂಪಕನ ವಿರುದ್ಧ ಬ್ರಾಡ್‍ಕಾಸ್ಟಿಂಗ್ ಅಥಾರಿಟಿಗೆ ದೂರು ನೀಡಿದ ಕಾಂಗ್ರೆಸ್
ಹೊಸದಿಲ್ಲಿ: ಕೇರಳದಲ್ಲಿ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿ ತಮ್ಮ ಕಚೇರಿಯಲ್ಲಿ ದಾಂಧಲೆಗೈದ ಘಟನೆ ಸಂಬಂಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ್ದ ಪ್ರತಿಕ್ರಿಯೆಯನ್ನು ದುರುದ್ದೇಶದಿಂದ ತಿರುಚಿದ್ದಾರೆ ಎಂದು ಝೀ ನ್ಯೂಸ್ ಮತ್ತದರ ನಿರೂಪಕನ ವಿರುದ್ಧ ಆರೋಪ ಹೊರಿಸಿ ಕಾಂಗ್ರೆಸ್ ಪಕ್ಷ ನ್ಯೂಸ್ ಬ್ರಾಡ್‍ಕಾಸ್ಟಿಂಗ್ ಎಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿಗೆ ದೂರು ನೀಡಿದೆ.
ಪ್ರಾಧಿಕಾರದ ಅಧ್ಯಕ್ಷರಿಗೆ ಈ ಕುರಿತು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಅವರು ಪತ್ರ ಬರೆದಿದ್ದಾರೆ.
ಜುಲೈ 1ರಂದು ಝೀ ನ್ಯೂಸ್‍ನಲ್ಲಿ ಪ್ರಸಾರವಾದ ಡಿಎನ್‍ಎ ಹೆಸರಿನ ಕಾರ್ಯಕ್ರಮದಲ್ಲಿ ನಿರೂಪಕ ಮಾಡಿದ ತಪ್ಪನ್ನು ದುರುದ್ದೇಶಪೂರಿತ ಮತ್ತು ಅನೈತಿಕ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ತಮ್ಮ ಕಚೇರಿಯಲ್ಲಿ ದಾಂಧಲೆಗೈದವರನ್ನು ಬೇಜವಾಬ್ದಾರಿಯಿಂದ ವರ್ತಿಸಿದ ಮಕ್ಕಳು ಎಂದು ರಾಹುಲ್ ಹೇಳಿದ್ದನ್ನೇ ಮುಂದಿಟ್ಟುಕೊಂಡು ಅವರು ಉದಯಪುರ್‍ನಲ್ಲಿ ಟೈಲರ್ ಕನ್ಹಯ್ಯಾಲಾಲ್ ಆರೋಪಿಗಳ ಕುರಿತು ಹಾಗೆ ಹೇಳಿದ್ದಾರೆಂದು ಝೀ ನಿರೂಪಕ ರೋಹಿತ್ ರಂಜನ್ ಹೇಳಿದ್ದರು. ನಂತರ ತಮ್ಮ ಪ್ರಮಾದಕ್ಕಾಗಿ ಅವರು ಕ್ಷಮೆಯಾಚಿಸಿದ್ದರು.
ಪಕ್ಷ ಹಾಗೂ ಹಲವರು ಈ ತಪ್ಪನ್ನು ಎತ್ತಿ ತೋರಿಸಿದ ನಂತರ ಹಾಗೂ ಹಲವಾರು ದೂರುಗಳನ್ನು ನೀಡಿದ ನಂತರವಷ್ಟೇ ಆ ನಿರ್ದಿಷ್ಟ ವೀಡಿಯೋ ತುಣುಕನ್ನು ತೆಗೆದುಹಾಕಲಾಗಿದೆ ಎಂದು ಪವನ್ ಖೇರಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಝೀ ನ್ಯೂಸ್ ಮತ್ತದರ ನಿರೂಪಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಅವರು ಆಗ್ರಹಿಸಿದ್ದಾರೆ.