ಪಕ್ಷ ವಿರೋಧಿ ಚಟುವಟಿಕೆಗಳನ್ನು ವಿವರಿಸಲು ಅಮರಿಂದರ್ ಸಿಂಗ್ ಅವರ ಪತ್ನಿಗೆ ಕಾಂಗ್ರೆಸ್ ಗಡುವು
ಚಂಡೀಗಢ: ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಅವರಿಗೆ ‘ಪಕ್ಷ ವಿರೋಧಿ’ ಚಟುವಟಿಕೆಗಳ ವರದಿಗಳ ಬಗ್ಗೆ ವಿವರಿಸಲು 7 ದಿನಗಳ ಗಡುವು ನೀಡಲಾಗಿದೆ. ವಿವರಣೆ ನೀಡಲು ವಿಫಲವಾದರೆ ಪಕ್ಷವು ಅವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು NDTV ವರದಿ ಮಾಡಿದೆ.
ಕಾಂಗ್ರೆಸ್‌ನ ಪಂಜಾಬ್ ಉಸ್ತುವಾರಿ ಹರೀಶ್ ಚೌಧರಿ ಅವರು ಕೌರ್ ಅವರಿಗೆ ಬರೆದಿರುವ ಪತ್ರದಲ್ಲಿ ಪಟಿಯಾಲಾದಿಂದ ಮಾಧ್ಯಮಗಳು ಮತ್ತು ಪಕ್ಷದ ನಾಯಕರಿಂದ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ವರದಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೌರ್ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿಯಾಗಿದ್ದಾರೆ. ಅಮರಿಂದರ್ ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
“ನಿಮ್ಮ ಪತಿಯ ಪಕ್ಷವನ್ನು ಬೆಂಬಲಿಸುವ ಕುರಿತಾಗಿ ಮಾಧ್ಯಮಗಳಲ್ಲಿ ನಿಮ್ಮ ಬಹಿರಂಗ ಪ್ರಕಟಣೆಗಳ ಬಗ್ಗೆಯೂ ನಮಗೆ ತಿಳಿದಿದೆ” ಎಂದು ಚೌಧರಿ ಈ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಣೀತ್ ಕೌರ್ ಅವರಿಗೆ ವಿವರಣೆ ನೀಡಲು ಏಳು ದಿನಗಳ ಗಡುವು ನೀಡಲಾಗಿದೆ.
ಕೌರ್ ಈ ಹಿಂದೆ 2009 ರಿಂದ 2014 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಭಾರತ ಸರಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕ್ಯಾಪ್ಟನ್ ಸಿಂಗ್ ಈ ತಿಂಗಳ ಆರಂಭದಲ್ಲಿ ಪಂಜಾಬ್ ಲೋಕ ಕಾಂಗ್ರೆಸ್ ಹೆಸರಿನ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 117 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದರೆ ಬಿಜೆಪಿಯೊಂದಿಗೆ ಸೀಟು ಹಂಚಿಕೆ ವ್ಯವಸ್ಥೆಯನ್ನು ಪರಿಗಣಿಸುವುದಾಗಿ ಸಿಂಗ್ ಹೇಳಿದ್ದರು.