ಆದಿತ್ಯನಾಥ್, ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ, ಪ್ರಚೋದನಕಾರಿ ಭಾಷಣ ಆರೋಪ: ಉವೈಸಿ ವಿರುದ್ಧ ಪ್ರಕರಣ ದಾಖಲು
ಕೋಮು ಸೌಹಾರ್ದತೆಯನ್ನು ಹಾಳು ಮಾಡಿದ, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ “ಅವಹೇಳನಕಾರಿ” ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಖಿಲ ಭಾರತ ಮಜ್ಲಿಸ್-ಇ-ಇತ್ತಿಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥರ ವಿರುದ್ಧ ಎಫ್ಐಆರ್ ಅನ್ನು ಗುರುವಾರ ರಾತ್ರಿ ಅವರ ಪಕ್ಷದ ರ್ಯಾಲಿಯ ನಂತರ ಬಾರಾಬಂಕಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ ಇತ್ಯಾದಿಗಳ ಮೇಲೆ ದ್ವೇಷವನ್ನು ಉತ್ತೇಜಿಸುವುದು), 188 (ಸಾರ್ವಜನಿಕ ಸೇವಕರ ಆದೇಶವನ್ನು ನಿರ್ಲಕ್ಷಿಸುವುದು), 269 (ಅಪಾಯಕಾರಿ ರೋಗವನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ), 270 (ರೋಗದ ಸೋಂಕು ಹರಡುವ ಸಾಧ್ಯತೆ)ಗಳ ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಾರಾಬಂಕಿ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್ ಹೇಳಿದರು.
“ತನ್ನ ಭಾಷಣದಲ್ಲಿ, AIMIM ಮುಖ್ಯಸ್ಥರು ಕೋಮು ಸೌಹಾರ್ದತೆಯನ್ನು ಹಾಳುಮಾಡುವ ಹೇಳಿಕೆಗಳನ್ನು ನೀಡಿದರು ಮತ್ತು 100 ವರ್ಷಗಳಷ್ಟು ಹಳೆಯದಾದ ರಾಮ ಸನೇಹಿ ಘಾಟ್ ಮಸೀದಿಯನ್ನು ಆಡಳಿತವು ಧ್ವಂಸಗೊಳಿಸಿತು ಮತ್ತು ಅದರ ಅವಶೇಷಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಹೇಳಿದರು. ಇದು ವಾಸ್ತವಕ್ಕೆ ವಿರುದ್ಧವಾಗಿದೆ” ಎಂದು ಎಸ್ಪಿ ಹೇಳಿದರು.
“ಈ ಹೇಳಿಕೆಯಿಂದ, ಉವೈಸಿ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಮತ್ತು ನಿರ್ದಿಷ್ಟ ಸಮುದಾಯದ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸಿದರು. ಅವರು ಪ್ರಧಾನಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ವಿರುದ್ಧ ಅಸಭ್ಯ ಮತ್ತು ಆಧಾರರಹಿತ ಟೀಕೆಗಳನ್ನು ಮಾಡಿದರು” ಎಂದು ಅವರು ಹೇಳಿದರು.
ಉವೈಸಿ ಮೂರು ದಿನಗಳ ಉತ್ತರ ಪ್ರದೇಶ ಪ್ರವಾಸದಲ್ಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು 100 ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದೆ.