ಸಚಿವ ಸೋಮಣ್ಣ ಕಂಡರೆ ನನಗೆ ಹೊಟ್ಟೆಕಿಚ್ಚು: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: `ಸಚಿವ ವಿ.ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ ಅಂತ. ನಿಮ್ಮ ವಯಸ್ಸೇನೆಂದು ಅವರನ್ನು ನಾನು ಕೇಳಿದೆ. ಅವ್ರು 70 ವರ್ಷ ಅಂದರು. ಆದರೂ ಅವರು ಇಪ್ಪತ್ತು ವರ್ಷದವರಂತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕಂಡದರೆ ನನಗೆ ಸ್ವಲ್ಪ ಹೊಟ್ಟೆ ಕಿಚ್ಚು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು.
ರವಿವಾರ ಇಲ್ಲಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಚಿವ ಸೋಮಣ್ಣ ಪಾದರಸದ ಹಾಗೆ. ನಾವು ಬ್ಯುಸಿಯಲ್ಲಿರುವಾಗ್ಲೇ ಬಂದು ನೂರಿನ್ನೂರು ಕೋಟಿ ರೂ.ಗೆ ಮಂಜೂರು ತಗೊಂಡು ಹೋಗಿರ್ತಾರೆ. ಈ ಬೆಂಗಳೂರು ಸಚಿವರು ಈಗ ಇದೇ ರೀತಿಯಲ್ಲಿ ಕಲಿತುಕೊಂಡಿದ್ದಾರೆ. ಇವ್ರೆಲ್ಲಾ ಕೆಲಸ ಮಾಡೋದ್ರಿಂದ ಬೆಂಗಳೂರು ಸಚಿವನಾಗಿ ನನ್ನ ಕೆಲಸ ಕಡಿಮೆ ಆಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದ್ದೀಯೇನಪ್ಪ: ವೇದಿಕೆಯಲ್ಲಿದ್ದವರ ಹೆಸರು ಉಲ್ಲೇಖಿಸುವ ವೇಳೆ ಸಿಎಂ ಬೊಮ್ಮಾಯಿ ಅವರು, ತೋಟಗಾರಿಕಾ ಸಚಿವ ಮುನಿರತ್ನ ಇದ್ದೀಯೇನಪ್ಪ ಎಂದರು. ಈ ಸಂದರ್ಭದಲ್ಲಿ ಮುನಿರತ್ನ ಯಾವುದೋ ಆಲೋಚನೆಯಲ್ಲಿ ಮುಳುಗಿದ್ದರು. ಆಗ ಪಕ್ಕದಲ್ಲೇ ಇದ್ದ ಸಂಸದ ತೇಜಸ್ವಿ ಸೂರ್ಯ ಮುನಿರತ್ನರನ್ನು ಎಚ್ಚರಿಸಿದರು. ಗಲಿಬಿಲಿಗೊಂಡ ಮುನಿರತ್ನ ಏನು ಎಂದು ಸಿಎಂ ಕಡೆ ತಿರುಗಿದರು. ಮುನಿರತ್ನ, ಏನಪ್ಪ ಇಲ್ಲೇ ಇದ್ದೀಯಾ ಎಂದು ಭಾಷಣ ಮುಂದುವರಿಸಿ, ಈ ಬೆಂಗಳೂರಿಗರು ಯಾವಾಗ ಕಾರ್ಯಕ್ರಮಕ್ಕೆ ಸೇರಿಕೊಳ್ತಾರೋ ಯಾವಾಗಾ ಕಾರ್ಯಕ್ರಮದಿಂದ ಬಿಟ್ಟು ಹೋಗ್ತಾರೋ ಗೊತ್ತಾಗಲ್ಲ’ ಎಂದು ಸಿಎಂ ನಕ್ಕರು.
ಪೇಚಿಗೆ ಸಿಲುಕಿದ ಸಚಿವ ಸುಧಾಕರ್: ಬೆಂಗಳೂರು ನಗರದ ಆರೋಗ್ಯ ವ್ಯವಸ್ಥೆ ಸರಿಯಿಲ್ಲ’ ಎಂದು ಹೇಳಿ ಸಿಎಂ ಬೊಮ್ಮಾಯಿ ಎದುರಲ್ಲೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪೇಚಿಗೆ ಸಿಲುಕಿದ ಪ್ರಸಂಗವೂ ನಡೆಯಿತು. ಬೆಂಗಳೂರಿಗೆ ತನ್ನದೇ ಆದ ಸ್ವತಂತ್ರ ಆರೋಗ್ಯ ವ್ಯವಸ್ಥೆ ಮಾಡಬೇಕು. ಇದಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯತೆ ಇಲ್ಲ. ಅದನ್ನು ಸರಿದೂಗಿಸುವ ಕೆಲಸ ಖಂಡಿತಾ ಮಾಡುತ್ತೇನೆ ಎಂದರು.