ಪೋಷಕರಿಲ್ಲದ ಮಕ್ಕಳ ಉಳಿವು ಅಪಾಯದಲ್ಲಿದೆ, ಹೃದಯ ಕಲಕುತ್ತಿದೆ’: ಕೋವಿಡ್ ಕುರಿತು ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ,: ಕೋವಿಡ್-19 ಹಲವು ಜೀವಗಳನ್ನು ಧ್ವಂಸಗೊಳಿಸಿದೆ ಮತ್ತು ಸಾಂಕ್ರಾಮಿಕದ ಸಂದರ್ಭದಲ್ಲಿ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಉಳಿವು ಅಪಾಯದಲ್ಲಿರುವುದು ಹೃದಯವನ್ನು ಕಲಕುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಆದರೆ ಇಂತಹ ಮಕ್ಕಳಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಕಟಿಸಿರುವ ಯೋಜನೆಗಳ ಬಗ್ಗೆ ತೃಪ್ತಿಯನ್ನು ಅದು ವ್ಯಕ್ತಪಡಿಸಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅನಾಥರಾಗಿರುವ ಅಥವಾ ಹೆತ್ತವರಲ್ಲೋರ್ವರನ್ನು ಕಳೆದುಕೊಂಡಿರುವ ಮಕ್ಕಳನ್ನು ಗುರುತಿಸುವಲ್ಲಿ ಕಾರ್ಯಾಂಗವು ತೃಪ್ತಿಕರ ಪ್ರಗತಿಯನ್ನು ಮಾಡಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಅನಿರುದ್ಧ ಬೋಸ್ ಅವರ ಪೀಠವು,‘ಅಗತ್ಯವಿರುವ ಮಕ್ಕಳಿಗೆ ನೆಮ್ಮದಿಯನ್ನು ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಯೋಜನೆಗಳನ್ನು ಪ್ರಕಟಿಸಿರುವುದು ನಮಗೆ ಸಮಾಧಾನವನ್ನುಂಟು ಮಾಡಿದೆ.
ಸಂಕಷ್ಟದಲ್ಲಿರುವ ಮಕ್ಕಳಿಗೆ ಪ್ರಾಥಮಿಕ ಅಗತ್ಯಗಳನ್ನು ತಕ್ಷಣ ಒದಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎನ್ನುವುದರಲ್ಲಿ ನಮಗೆ ಯಾವುದೇ ಸಂಶಯವಿಲ್ಲ ’ ಎಂದು ಹೇಳಿತು.
‘ಮಕ್ಕಳ ರಕ್ಷಣಾ ಗೃಹಗಳಲ್ಲಿ ಕೋವಿಡ್ ಸಾಂಕ್ರಾಮಿಕ ’ಕುರಿತು ಸ್ವಯಂಪ್ರೇರಿತ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,ಸಾಂಕ್ರಾಮಿಕದ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಬೆಟ್ಟುಮಾಡಿತು.
ಕಾಳಜಿ ಮತ್ತು ರಕ್ಷಣೆಯ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲು ಮಕ್ಕಳ ಕಲ್ಯಾಣ ಸಮಿತಿಗಳು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ,2015ರ ಅನುಸಾರ ವಿಚಾರಣೆಗಳನ್ನು ತ್ವರಿತಗೊಳಿಸಬೇಕು,ಅಗತ್ಯವುಳ್ಳ ಅಪ್ರಾಪ್ತವಯಸ್ಕ ಮಕ್ಕಳಿಗೆ ಯೋಜನೆಗಳ ಲಾಭಗಳು ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ ನ್ಯಾಯಾಲಯವು,ಎಲ್ಲ ಮಕ್ಕಳು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ ಮತ್ತು ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಸರಕಾರದ ಕರ್ತವ್ಯ ಮತ್ತು ಬಾಧ್ಯತೆಯಾಗಿದೆ ಎಂದು ಹೇಳಿತು.
ಕೋವಿಡ್ ಬಾಧಿತ ಮಕ್ಕಳ ಬೆಂಬಲ ಮತ್ತು ಸಬಲೀಕರಣಕ್ಕಾಗಿ ಪ್ರಾರಂಭಿಸಲಾಗಿರುವ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ’ಯೋಜನೆಯಡಿ 18ವರ್ಷ ಪ್ರಾಯದವರೆಗಿನ ಅರ್ಹ ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸಲಾಗುವುದು ಎಂಬ ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಯವರ ಹೇಳಿಕೆಯನ್ನು ಪೀಠವು ಗಮನಕ್ಕೆ ತೆಗೆದುಕೊಂಡಿತು.