ರೈತರಿಗೆ ಬಂಪರ್ ಗಿಫ್ಟ್ ಘೋಷಿಸಿದ : ತುಮುಲ್

ತುಮಕೂರು ಸಹಕಾರಿ ಹಾಲು ಒಕ್ಕೂಟದ ಹಾಲು ಶೇಖರಣೆ ದಿನೇ ದಿನೇ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದ್ದು, 2020-21ನೇ ಸಾಲಿನಲ್ಲಿ ದಿನವಹಿ ಸರಾಸರಿ (ಫೆಬ್ರವರಿ-21 ಅಂತ್ಯಕ್ಕೆ) 7,69,982 ಕೆ.ಜಿ ಶೇಖರಣೆಯಾಗಿರುತ್ತದೆ. ದಿನಾಂಕ 28.07.2020 ರಂದು 8,77,087 ಕೆ.ಜಿ ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಜಿಲ್ಲೆಯಲ್ಲಿ ಒಟ್ಟು 1255 ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪ್ತಿಯ ಸಂಘಗಳಲ್ಲಿ ಒಟ್ಟು ೨,೮೧,೮೦೮ ಜನ ಸದಸ್ಯರಿರುತ್ತಾರೆ. ಇದರಲ್ಲಿ ಪ್ರತಿದಿನ 71,705 ಸಕ್ರಿಯ ಸದಸ್ಯರು ಹಾಲು ಸರಬರಾಜು ಮಾಡುತ್ತಿದ್ದಾರೆಂದು ತುಮುಲ್ ಅಧ್ಯಕ್ಷರಾದ ಮಹಾಲಿಂಗಪ್ಪರವರು ತಿಳಿಸಿರುತ್ತಾರೆ.

ಹಾಲು ಒಕ್ಕೂಟದಲ್ಲಿ ಪ್ರಸ್ತುತ ಮಾರ್ಚ್-2021 ರ ಮಾಹೆಯಲ್ಲಿ ದಿನವಹಿ ಸರಾಸರಿ 7.00 ಲಕ್ಷ ಕೆ.ಜಿ. ಹಾಲು ಶೇಖರಣೆಯಾಗುತ್ತಿದ್ದು, ಇದರಲ್ಲಿ ದಿನವಹಿ ಸರಾಸರಿ ಹಾಲು, ಮೊಸರು, ಯುಹೆಚ್.ಟಿ. (ತೃಪ್ತಿ, ಹೆಲ್ದಿ ಲೈಫ್ & ವಿಜಯ ವಜ್ರ) ಹಾಗೂ ಅಂತರಡೇರಿ ಹಾಲಿನ ಮಾರಾಟ ಒಟ್ಟು6.0 ಲಕ್ಷ ಲೀಟರ್‌ಗಳಷ್ಟು ಹಾಲು ದ್ರವ ರೂಪದಲ್ಲಿ ಮಾರಾಟವಾಗುತ್ತಿದ್ದು, ಉಳಿಕೆ 1.00 ಲಕ್ಷ ಲೀಟರ್‌ಗಳಷ್ಟು ಹಾಲು ಪರಿವರ್ತನೆಗೆ ರವಾನಿಸಲಾಗುತ್ತಿದೆಂದು ಇದೇ ಸಮಯದಲ್ಲಿ ತಿಳಿಸಿದರು.

ಪ್ರಸ್ತುತ ಒಕ್ಕೂಟದಲ್ಲಿ ದಿನಾಂಕ 15.03.2021 ರ ಅಂತ್ಯಕ್ಕೆ ಬೆಣ್ಣೆ 1057.30 ಮೆಟ್ರಿಕ್ ಟನ್‌ಗಳು, ಕೆನೆ ರಹಿತ ಹಾಲಿನ ಪುಡಿ 1727.00 ಮೆಟ್ರಿಕ್ ಟನ್‌ಗಳು ಹಾಗೂ ಕೆನೆಭರಿತ ಹಾಲಿನ ಪುಡಿ 280 ಮೆಟ್ರಿಕ್ ಟನ್‌ಗಳಷ್ಟು ದಾಸ್ತಾನು ಇದ್ದು, ಇದರ ಅಂದಾಜು ದಾಸ್ತಾನು ಮೌಲ್ಯ ರೂ.73.54 ಕೋಟಿಗಳಷ್ಟಾಗಲಿರುತ್ತದೆ ಎಂದು ತಿಳಿಸಿದರು.

ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಆಡಳಿತ ಮಂಡಲಿಯು ದಿನಾಂಕ 26.03.2021 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರವನ್ನು ದಿನಾಂಕ 01.03.2021 ರಿಂದ ಜಾರಿಗೆ ಬರುವಂತೆ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ ರೂ. 2-00 ಹಾಗೂ ಸಂಘದ ನಿರ್ವಹಣೆಗಾಗಿ ಪ್ರತಿ ಕೆ.ಜಿ. ಹಾಲಿಗೆ ರೂ.0.20/- ಹೆಚ್ಚಿಸಲಾಗಿರುತ್ತದೆ. ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ. 3.5 ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ ರೂ.27.00, ಸಂಘಗಳಿಗೆ ರೂ.27.93 ರಂತೆ ಹಾಗೂ 4.1 ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ ರೂ. 28.39 ರಂತೆ, ಸಂಘಗಳಿಗೆ ರೂ. 29.32 ರಂತೆ ನೀಡಲಾಗುವುದು. ಒಕ್ಕೂಟದಲ್ಲಿ ಶೇಕಡ 96 ಕ್ಕಿಂತಲೂ ಅಧಿಕ ಹಾಲು 4.1 ಜಿಡ್ಡಿನಾಂಶ ಇದ್ದು, ಸಂಘಗಳಿಗೆ ರೂ.29.32 ಪೈಸೆಯಂತೆ ಪಾವತಿ ಮಾಡಬೇಕಾಗುತ್ತದೆಂದರು.

ಒಕ್ಕೂಟವು ಫೆಬ್ರವರಿ-2021 ರಲ್ಲಿ ಪ್ರತಿ ಲೀಟರ್ ಹಾಲಿಗೆ ರೂ. 2-00 ಹೆಚ್ಚಿಸಿ ಉತ್ಪಾದಕರಿಗೆ ರೂ. 25.00 ನೀಡಲಾಗುತ್ತಿತ್ತು. 2020-21 ನೇ ಸಾಲಿನ ಅಂತ್ಯದಲ್ಲಿ ಹಾಲಿನಪುಡಿ ಹಾಗೂ ಬೆಣ್ಣೆಗೆ ಉತ್ತಮ ಧಾರಣೆ ದೊರಕಿರುವ ಹಿನ್ನೆಲೆಯಲ್ಲಿ ಒಕ್ಕೂಟವು ಲಾಭಗಳಿಸಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಅವಧಿಯಲ್ಲಿಯೂ ಸಹ ಒಕ್ಕೂಟದ ಬೆಳವಣಿಗೆಗೆ ಶ್ರಮಿಸಿ, ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಒಕ್ಕೂಟದ ಧ್ಯೇಯವಾಗಿದ್ದು, ದಿನಾಂಕ 01.03.2021 ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ರೂ. 2.00 ಗಳನ್ನು ಹಾಗೂ ಸಂಘದ ನಿರ್ವಹಣೆಗಾಗಿ ಪ್ರತಿ ಕೆ.ಜಿ. ಹಾಲಿಗೆ ರೂ.0.20/- ಹೆಚ್ಚುವರಿಯಾಗಿ ನೀಡಲಾಗಿರುತ್ತದೆಂದರು.

ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿ ಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿರುವುದಿಲ್ಲ ಎಂದರು. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಂದರು.

ಒಕ್ಕೂಟವು ನೀಡುತ್ತಿರುವ ಹಾಲಿನ ದರದ ಜೊತೆಗೆ ಕರ್ನಾಟಕ ಘನ ಸರ್ಕಾರದ ರೂ. 5.00 ಪ್ರೋತ್ಸಾಹಧನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚು ಹೆಚ್ಚಿನ ಹಾಲಿನ ಉತ್ಪಾದನೆ ಮಾಡಲು, ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಜಿಲ್ಲೆಯ ಸಮಸ್ತ ರೈತರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!