ಮುಂಬೈ : ಆರೋಗ್ಯ ಕಾರ್ಯಕರ್ತರು, ರಾಜಕಾರಣಿಗಳಿಗೆ ಬೂಸ್ಟರ್ ಡೋಸ್ !ಮುಂಬೈ : ಆರೋಗ್ಯ ಕಾರ್ಯಕರ್ತರು, ರಾಜಕಾರಣಿಗಳಿಗೆ ಬೂಸ್ಟರ್ ಡೋಸ್ !
ಮುಂಬೈ: ಮಹಾನಗರದಲ್ಲಿ ಕೆಲ ಆರೋಗ್ಯ ಕಾರ್ಯಕರ್ತರು, ಕೆಲ ರಾಜಕಾರಣಿಗಳು ಹಾಗೂ ಅವರ ಸಿಬ್ಬಂದಿ ಕೋವಿಡ್-19 ವಿರುದ್ಧದ ಲಸಿಕೆಯ ಮೂರನೇ ಡೋಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬೂಸ್ಟರ್ ಡೋಸ್‌ಗಳನ್ನು ಹಲವು ಪಾಶ್ಚಿಮಾತ್ಯ ದೇಶಗಳಲ್ಲಿ ನೀಡಲಾಗುತ್ತಿದ್ದು, ಇದು ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಹೇಳಿಕೆ ನೀಡಿ, ಇದು ಆದ್ಯತೆಯ ವಿಷಯವಲ್ಲ; ಮೂರನೇ ಡೋಸ್ ಬಗೆಗಿನ ನಿರ್ಧಾರ ಅನಿವಾರ್ಯವಲ್ಲ ಎಂಬ ಸುಳಿವು ನೀಡಿದೆ.
ಆದಾಗ್ಯೂ ಕೋವಿನ್ ಆ್ಯಪ್‌ನಲ್ಲಿ ದಾಖಲಿಸದೇ ಅಥವಾ ಭಿನ್ನ ಫೋನ್ ನಂಬರ್ ಬಳಸಿ ಹಲವು ಮಂದಿ ಆರೋಗ್ಯ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಲವು ಮಂದಿಯಲ್ಲಿ ಬೂಸ್ಟರ್ ಡೋಸ್ ಪಡೆಯುವ ಮುನ್ನ ಇದ್ದ ಪ್ರತಿಕಾಯ ಪ್ರಮಾಣ ಆ ಬಳಿಕ ಗಣನೀಯವಾಗಿ ಹೆಚ್ಚಿದೆ ಎನ್ನಲಾಗಿದೆ. “ಲಸಿಕೆ ಪಡೆದವರ ಪಟ್ಟಿಯಲ್ಲಿ ಕಳೆದ ಫೆಬ್ರುವರಿ ತಿಂಗಳಲ್ಲಿ ಎರಡೂ ಡೋಸ್ ಪಡೆದ ವೈದ್ಯರ ಹೆಸರುಗಳು ಸೇರಿದ್ದು, ಇವರ ಆರೋಗ್ಯ ತಪಾಸಣೆ ಮಾಡಿದಾಗ ಪ್ರತಿಕಾಯ ಮಟ್ಟ ದುಪ್ಪಟ್ಟಾಗಿರುವುದು ಕಂಡುಬಂದಿದೆ” ಎಂದು ಉನ್ನತ ಮೂಲಗಳು ಹೇಳಿವೆ.
ತಮ್ಮ ಸಹೋದ್ಯೋಗಿಗಳಿಗೆ ಸೋಂಕು ತಗುಲುತ್ತಿರುವುದನ್ನು ಕಂಡು ಹೊಸದಾಗಿ ರೂಪುಗೊಳ್ಳುತ್ತಿರುವ ಪ್ರಬೇಧಗಳಿಂದ ಚಿಂತಿತರಾಗಿರುವ ಆರೋಗ್ಯ ವೃತ್ತಿಪರರು ಬೂಸ್ಟರ್ ಡೋಸ್ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.