ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಗೋರಖ್‌ಪುರದಿಂದ ಸ್ಫರ್ಧಿಸಲಿರುವ ಸಿಎಂ ಆದಿತ್ಯನಾಥ್
ಹೊಸದಿಲ್ಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗೋರಖ್‌ಪುರ (ನಗರ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಶನಿವಾರ ಮಧ್ಯಾಹ್ನ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಗೋರಖ್‌ಪುರ (ನಗರ) ಸ್ಥಾನಕ್ಕೆ ಆರನೇ ಮತ್ತು ಅಂತಿಮ ಹಂತದ ಮಾರ್ಚ್ 3 ರಂದು ಮತದಾನ ನಡೆಯಲಿದೆ.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿರದ ಆದಿತ್ಯನಾಥ್ ಎರಡು ದೇವಾಲಯಗಳ ನಗರಿಗಳಾದ ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಕೇಳಿ ಬರುತ್ತಿತ್ತು.
ಗೋರಖ್‌ಪುರ (ನಗರ) ಕ್ಷೇತ್ರವು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದೆ ಮತ್ತು 2017 ರವರೆಗೆ ಅವರು ಈ ಕ್ಷೇತ್ರದಿಂದ ಸತತ ಐದು ಅವಧಿಗೆ ಲೋಕಸಭೆಗೆ ಚುನಾಯಿತರಾಗಿದ್ದರು.
“ಹೆಚ್ಚು ಸಮಾಲೋಚನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ… ಪಕ್ಷದ ಉನ್ನತ ನಾಯಕತ್ವವು ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದೆ” ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದರು.
ಫೆಬ್ರವರಿ 10 ರಂದು ಉತ್ತರಪ್ರದೇಶದಲ್ಲಿ ಏಳು ಹಂತದ ಮತದಾನ ಪ್ರಾರಂಭವಾಗಲಿದೆ.