ಭೀಮಾ ಕೊರೆಗಾಂವ್ ಪ್ರಕರಣ: ಪ್ರೊ. ಹನಿಬಾಬುಗೆ ವೈದ್ಯಕೀಯ ನೆರವು ಒದಗಿಸಲು ಹೈಕೋರ್ಟ್ ಸೂಚನೆ
ಮುಂಬೈ, : ಭೀಮಾ ಕೊರೆಗಾಂವ್ ಪ್ರಕರಣದ ಆರೋಪಿ ಪ್ರೊಫೆಸರ್ ಹನಿ ಬಾಬು ಅವರನ್ನು ಮುಂಬೈಯ ತಲೋಜಾ ಜೈಲಿಗೆ ಸ್ಥಳಾಂತರಿಸಬೇಕು ಮತ್ತು ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಿಗಾ ವಹಿಸಬೇಕು ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಕಣ್ಣಿನ ಸೋಂಕಿನಿಂದ ಬಳಲುತ್ತಿದ್ದ ಹಾಗೂ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರೊಫೆಸರ್ ಹನಿ ಬಾಬುರನ್ನು ಕಳೆದ ಮೇ ತಿಂಗಳಿನಲ್ಲಿ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅವರು ಈಗ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಬಹುದು ಎಂದು ಆಸ್ಪತ್ರೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಬಾಬುರನ್ನು ಜಾಮೀನಿನಡಿ ಬಿಡುಗಡೆಗೊಳಿಸಬೇಕೆಂದು ಕೋರಿ ಅವರ ಪತ್ನಿ ಜೆನ್ನೀ ರೊವೆನಾ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜಾಮೀನು ನೀಡಲು ನಿರಾಕರಿಸಿತು. ಬಾಬುರನ್ನು ಮತ್ತೆ ತಲೋಜಾ ಜೈಲಿಗೆ ಸ್ಥಳಾಂತರಿಸಬೇಕು. ಆದರೆ ಅವರ ಆರೋಗ್ಯಸ್ಥಿತಿಯ ಬಗ್ಗೆ ನಿಗಾ ವಹಿಸಬೇಕು. ಅಗತ್ಯವಿದ್ದಾಗ ಅವರನ್ನು ಜೆಜೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಬೇಕು ಎಂದು ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ.
ಬಾಬು ತಮ್ಮ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಪಾವತಿಸಬೇಕು ಎಂಬ ಫಿರ್ಯಾದಿದಾರರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ವಿಚಾರಣಾಧೀನರು ಮತ್ತು ಅಪರಾಧಿಗಳ ಆರೋಗ್ಯ ರಕ್ಷಣೆ ಸರಕಾರದ ಕರ್ತವ್ಯವಾಗಿದೆ ಎಂದಿದೆ.