BH ಸಿರೀಸ್ ವಾಹನ ನೋಂದಣಿ ಪರಿಚಯಿಸಿದ ಕೇಂದ್ರ ಸರ್ಕಾರ  

BH ಸಿರೀಸ್ ವಾಹನ ನೋಂದಣಿ ಪರಿಚಯಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿನ ವಾಹನ ವರ್ಗಾವಣೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಪರಿಚಯಿಸಿದೆ. ಈ ನಿಯಮದಡಿ ಇನ್ಮುಂದೆ ವಾಹನಗಳಿಗೆ ಹೊಸ ನೋಂದಣಿ ಗುರುತು ಸಿಗಲಿದೆ. ಅಂದರೆ ಹೊಸ ರಿಜಿಸ್ಟರೇಷನ್ ‘ಭಾರತ್ ಸರಣಿ’ ಅಥವಾ ‘BH ಸಿರೀಸ್’ ಆಗಿರಲಿದೆ. ಅದರಂತೆ ಈ ನೋಂದಣಿ ನಂಬರ್ ಪ್ಲೇಟ್​ YY BH 4144 XX ಸ್ವರೂಪದಲ್ಲಿರಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಭಾರತ್ ಸರಣಿಯ ವಾಹನಗಳ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹೊಸ ಬಿಎಚ್ ಸರಣಿಯ ವಾಹನಗಳಿಗೆ ಯಾವುದೇ ನೋಂದಣಿಯ ವರ್ಗಾವಣೆ ಅಗತ್ಯವಿಲ್ಲ. ಇದು ದೇಶಾದ್ಯಂತ ಮಾನ್ಯವಾಗಿರುತ್ತದೆ. ಈ ಸೌಲಭ್ಯವು ರಕ್ಷಣಾ ಸಿಬ್ಬಂದಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಲಭ್ಯವಿರುತ್ತದೆ. ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಚೇರಿ ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳು ಕೂಡ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.

ಈ ನಿಯಮದ ಅತೀ ದೊಡ್ಡ ಪ್ರಯೋಜನವೆಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾದರೆ, ಅಥವಾ ಪದೇ ಪದೇ ಬೇರೊಂದು ರಾಜ್ಯಕ್ಕೆ ಪ್ರಯಾಣಿಸುತ್ತಿದ್ದರೆ ತಮ್ಮ ವಾಹನಗಳ ನೋಂದಣಿ ಪ್ರಮಾಣಪತ್ರವನ್ನು ವರ್ಗಾಯಿಸುವ ಅಗತ್ಯವಿಲ್ಲ. ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 47 ರ ಪ್ರಕಾರ, ಒಂದು ವಾಹನವನ್ನು ನೋಂದಾಯಿಸಿದ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಗರಿಷ್ಠ 12 ತಿಂಗಳುಗಳವರೆಗೆ ಮಾತ್ರ ಓಡಿಸಬಹುದು.

12 ತಿಂಗಳ ಅವಧಿ ಮುಗಿಯುವ ಮೊದಲು ಮಾಲೀಕರು ಅಂತಹ ವಾಹನಗಳನ್ನು ಮರು ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ವಾಹನ ಮಾಲೀಕರು ಮೂಲ ರಾಜ್ಯದಿಂದ ನೋ ಆಬ್ಜೆಕ್ಷನ್ ಪ್ರಮಾಣ ಪತ್ರವನ್ನು ಪಡೆಯಬೇಕು. ರಸ್ತೆ ತೆರಿಗೆಯನ್ನು ಪಾವತಿಸಿದ ನಂತರ ಹೊಸ ರಾಜ್ಯದಲ್ಲಿ ವಾಹನವನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲಿ ನಿಬಂಧನೆಯು ಬಹಳ ತೊಡಕಿನ ಪ್ರಕ್ರಿಯೆ. ಇದು ಒಂದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಈ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ರಾಜ್ಯದಿಂದ ರಾಜ್ಯಕ್ಕೆ ತಡೆರಹಿತವಾಗಿ ವಾಹನಗಳನ್ನು ವರ್ಗಾಯಿಸಲು ಅನುಕೂಲವಾಗುವಂತೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ವಾಹನಗಳಿಗೆ ಹೊಸ ನೋಂದಣಿ ಗುರುತು ಪರಿಚಯಿಸಿದೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಪ್ರಸ್ತುತ, ಬಿಎಚ್ ಸರಣಿಯ ಅಡಿಯಲ್ಲಿ ಈ ವಾಹನ ನೋಂದಣಿ ಸೌಲಭ್ಯವು ರಕ್ಷಣಾ ಸಿಬ್ಬಂದಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನೌಕರರು, ಕೇಂದ್ರ ಮತ್ತು ರಾಜ್ಯ ಪಿಎಸ್​ಯು ಉದ್ಯೋಗಿಗಳು ಮತ್ತು ಖಾಸಗಿ ವಲಯದ ಕಂಪನಿಗಳು/ಸಂಸ್ಥೆಗಳಿಗೆ ಸ್ವಯಂಪ್ರೇರಿತವಾಗಿ ಲಭ್ಯವಿರಲಿದೆ. ಮೋಟಾರ್ ವಾಹನ ತೆರಿಗೆಯನ್ನು ಎರಡು ವರ್ಷಗಳವರೆಗೆ, ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ನೋಂದಣಿಗಾಗಿ ತೆರಿಗೆ ಸಂಗ್ರಹಿಸಲಾಗುತ್ತದೆ. ಹದಿನಾಲ್ಕನೇ ವರ್ಷದ ಪೂರ್ಣಗೊಂಡ ನಂತರ, ಮೋಟಾರು ವಾಹನ ತೆರಿಗೆಯನ್ನು ವಾರ್ಷಿಕವಾಗಿ ವಿಧಿಸಲಾಗುತ್ತದೆ.

 

ಆನ್​ಲೈನ್​ ನೋಂದಣಿ:

ಪದೇ ಪದೇ ವರ್ಗಾವಣೆಗೆ ಒಳಗಾಗುವ ಮತ್ತು ಇತರ ರಾಜ್ಯಗಳಿಗೆ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗುವ ಜನರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಬಿಎಚ್ ಸರಣಿ (ಭಾರತ್ ಸರಣಿ) ವಾಹನಗಳಿಗೆ, ಬೇರೆ ರಾಜ್ಯಕ್ಕೆ ತೆರಳಿದಾಗ ಮರು ನೋಂದಣಿ ಅಗತ್ಯವಿಲ್ಲ. ವಾಹನದ ಮಾಲೀಕರು BH ಸರಣಿಯ ಆಯ್ಕೆಯನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ, ಅವರು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ನೀವು ಆರ್‌ಟಿಒಗೆ ಹೋಗುವ ಅಗತ್ಯವಿಲ್ಲ. ಈ ಕಾರಣದಿಂದಾಗಿ ಈ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಇರಿಸಲಾಗಿದೆ.

BH- ಸರಣಿಯಲ್ಲಿನ ಸ್ವರೂಪವೇನು?

BH- ಸರಣಿಯ ನೋಂದಣಿ ಗುರುತು YY BH #### XX ಆಗಿರುತ್ತದೆ. YY ನೋಂದಣಿಯ ವರ್ಷವನ್ನು ಸೂಚಿಸುತ್ತದೆ, BH ಎಂಬುದು ಭಾರತ್ ಸರಣಿಯ ಸಂಕೇತವಾಗಿದೆ. #### ಎಂಬಲ್ಲಿ ನಾಲ್ಕು ಅಂಕಿಯ ಸಂಖ್ಯೆ ಇರಲಿದೆ. ಇನ್ನು XX ಎರಡು ವರ್ಣಮಾಲೆಗಳನ್ನು ಹೊಂದಿರಲಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!