ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಕನ್ನಡ ಉಳಿಸೋಣ

ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಕನ್ನಡ ಉಳಿಸೋಣ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ ಕನ್ನಡ ಭಾಷೆಯಲ್ಲಿಯೇ ಆಡಳಿತ ನಡೆಸಿದರೆ ಅನಕ್ಷರಸ್ಥರಿಗೆ, ಗ್ರಾಮೀಣ ಭಾಗದ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಸುಲಭವಾಗಿ ಅರ್ಥವಾಗುವುದರಿಂದ ಕನ್ನಡವನ್ನು ಬಳಸುವ ಮೂಲಕ ಕನ್ನಡದ ಏಳಿಗೆಗೆ ನಾವೆಲ್ಲರೂ ಒಟ್ಟಾಗಿ ಕೈಜೋಡಿಸೋಣ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. ಅವರು ಹೇಳಿದರು.

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ “ಕನ್ನಡಕ್ಕಾಗಿ ನಾವು” ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ದೇವನಹಳ್ಳಿ ತಾಲ್ಲೂಕಿನ ಐತಿಹಾಸಿಕ ಕೋಟೆಯ ಆವರಣದಲ್ಲಿಂದು ಆಯೋಜಿಸಲಾಗಿದ್ದ ಸಾಮೂಹಿಕ ಕನ್ನಡ ಗೀತೆಗಾಯನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೇ ಕನ್ನಡ ಉಳಿಸುವುದು, ಬೆಳೆಸುವುದು ಹಾಗೂ ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಕನ್ನಡಕ್ಕಾಗಿ ನಾವು ಅಭಿಯಾನವು ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ರಾಜ್ಯದ ಮೂಲೆ-ಮೂಲೆಗಳಲ್ಲಿ ಪ್ರತಿ‌ದಿನ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು ಎಂದರಲ್ಲದೆ, ಪೋಷಕರು, ಶಿಕ್ಷಕರು ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಕುರಿತು ಒಲವು ಮೂಡಿಸಬೇಕು ಹಾಗೂ ಕನ್ನಡ ಭಾಷೆಯಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ರಿಯಾಯಿತಿ ನೀಡಿ, ಉನ್ನತ ಶಿಕ್ಷಣಕ್ಕೆ ನೆರವಾಗಬೇಕು ಎಂದು ತಿಳಿಸಿದರು.

 

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ ಎಲ್ಲರೂ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದರೊಂದಿಗೆ ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವವರಿಗೂ ಕನ್ನಡ ಕಲಿಸುವ ಕೆಲಸವಾಗಬೇಕು ಎಂದರಲ್ಲದೆ, ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗದೆ ದೈನಂದಿನ ಜೀವನದಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು ಹಾಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ರೇಖಾ ವೇಣುಗೋಪಾಲ್, ಉಪಾಧ್ಯಕ್ಷರಾದ ಪುಷ್ಪಲತಾ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಧಿಕಾರಿ ಅರುಳ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಆರಾಧ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಮಹೇಶ್.ಎನ್.ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್, ದೇವನಹಳ್ಳಿ ತಹಶೀಲ್ದಾರ್ ಅನಿಲ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!