ಬೆಳೆ ಪರಿಹಾರ ನೀಡಲು ಶೀಘ್ರ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದ್ದು, ಬೆಳೆ ಪರಿಹಾರ ನೀಡಲು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಳೆ ಹಾನಿಯನ್ನು ಸಮೀಕ್ಷೆ ಮಾಡಲಾಗುತ್ತಿದ್ದು, ಬೆಳೆ ಹಾನಿಯಿಂದ ತರಕಾರಿ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಬಗ್ಗೆ ಕಣ್ಣಿರಿಸಲಾಗಿದ್ದು, ಭತ್ತದ ಹಾಗೂ ಇತರೆ ಧಾನ್ಯಗಳ ಎಂ.ಎಸ್.ಪಿ ಖರೀದಿ ಕುರಿತು ಮಹತ್ವದ ಸಭೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ನಿಗಾ ಇಡಲಾಗಿದೆ ಎಂದು ಅವರು ಹೇಳಿದರು.
ಶೀಘ್ರಗಾಗಿ ಹಾಳಾಗುವ ವಸ್ತುಗಳ ಬಗ್ಗೆಯೂ ಸಂಪೂರ್ಣ ವರದಿ ಸಲ್ಲಿಸುವಂತೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಬೆಳೆ ಪರಿಹಾರದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪತ್ರ ಬರೆಯುವ ಮೊದಲೆ ಬೆಳೆ ಸಮೀಕ್ಷೆ ಮಾಡಿ, ಕೂಡಲೇ ಪರಿಹಾರ ನೀಡಲು ಎಲ್ಲ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.