ತುಮಕೂರು- ನೀರಾವರಿ ಯೋಜನೆಗಳ ಬಗ್ಗೆ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಗೌರಿಶಂಕರ್ ಅವರಿಗೆ ಸಾಮಾನ್ಯ ಜ್ಞಾನ ಇದ್ದಂತೆ ಕಾಣುತ್ತಿಲ್ಲ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಮಾತ ನಾಡಿದ ಅವರು ಮಾಜಿ ಪ್ರಧಾನಿ ಹಾಗೂ ಶಾಸಕರ ಪಕ್ಷದವರೆ ಆದ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಬಗ್ಗೆ ಅಗತ್ಯ ಮಾಹಿತಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಹಲವಾರು ವರ್ಷಗಳ ಹೋರಾಟದ ಫಲವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹೆಬ್ಬೂರು, ಗೂಳೂರು ಏತ ನೀರಾವರಿ ಯೋಜನೆ ಜಾರಿಗೊಂಡಿದ್ದು, ನೂರಾರು ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಅನೇಕ ರೈತರು ಸಾರ್ವಜನಿಕರ ಹೋರಾಟದ ಫಲವಾಗಿ ಅನುಷ್ಠಾನಗೊಂಡಿ ರುವ ಈ ಯೋಜನೆಯನ್ನು ಅವೈಜ್ಞಾನಿಕವೆಂದು ಹಾಳು ಗೆಡವಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಶಾಸಕರಾದವರಿಗೆ ಜವಾಬ್ದಾರಿ ಇರಬೇಕು. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ನಾನು ಈ ಕ್ಷೇತ್ರದ ಶಾಸಕನಾಗಿ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರಿಂದ ಈ ಯೋಜನೆಗೆ ಮಂಜೂರಾತಿ ನೀಡಿದರು ಎಂದರು.
ನಾನು ಶಾಸಕನಾಗಿ ಹೋರಾಟಿ ಈ ಯೋಜನೆ ಜಾರಿಗೆ ಶ್ರಮಿಸಿದ್ದು, ದಿವಂಗತ ವೈ.ಕೆ.ರಾಮಯ್ಯ, ಎಸ್.ಪಿ. ಮುದ್ದಹನುಮೇಗೌಡ, ಹೆಚ್.ನಿಂಗಪ್ಪ ಮುಂತಾದವರು ಇದಕ್ಕಾಗಿ ಶ್ರಮಿಸಿದ್ದಾರೆ ಎಂದು ಸ್ಮರಿಸಿಕೊಂಡರು.
ಹೇಮಾವತಿ ಜಲಾಶಯ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದಾಗ ತುಮಕೂರು ನಾಲೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದಾಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ಗೂಳೂರು, ಹೆಬ್ಬೂರು, ನಾಗವಲ್ಲಿ ಇತ್ಯಾದಿ ಕೆರೆಗಳಿಗೆ ನೀರು ಹರಿಸಿದ್ದೇನೆ. ಜಲಾಶಯ ದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಾಗ ನೀರು ಹರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಗತ್ಯವಿರುವ ಕೆರೆಗಳಿಗೆ ನೀರನ್ನು ತುಂಬಿಸುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ಪ್ರಭಾಕರ್, ಸಿದ್ದೇಗೌಡ, ರಮೇಶ್, ಉಮೇಶ್‌ಗೌಡ, ವಿಜಯಕುಮಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.