ಮತಾಂತರ ಆರೋಪ: ಚತ್ತೀಸ್ ಗಢದಲ್ಲಿ ನೂರಾರು ಜನರಿಂದ ಪಾದ್ರಿಗೆ ಹಲ್ಲೆ
ರಾಯಪುರ, ಅ. 30: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 100ಕ್ಕೂ ಅಧಿಕ ಜನರಿದ್ದ ಗುಂಪು 25 ವರ್ಷದ ಪಾದ್ರಿ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಚತ್ತೀಸ್ಗಢದ ಕಬೀರ್ಧಾಮ್ ನಲ್ಲಿ ರವಿವಾರ ನಡೆದಿದೆ. ದುಷ್ಕರ್ಮಿಗಳ ಗುಂಪು ಮಧ್ಯಾಹ್ನ ಸುಮಾರು 1 ಗಂಟೆಗೆ ಪೊಲಾಮಿ ಗ್ರಾಮದಲ್ಲಿರುವ ಪಾದ್ರಿ ಕಾವಲ್ಸಿಂಗ್ ಪರಾಸ್ಟೆ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿತು. ಅಲ್ಲದೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿತು. ಅನಂತರ ಅಲ್ಲಿಂದ ಪರಾರಿಯಾಯಿತು ಎಂದು ಕಬೀರ್ಧಾಮ್ನ ಪೊಲೀಸರು ತಿಳಿಸಿದ್ದಾರೆ.
ತನ್ನ ಮನೆಯಲ್ಲಿ ರವಿವಾರದ ಪ್ರಾರ್ಥನೆ ನಡೆಯುತ್ತಿರುವ ಸಂದರ್ಭ ಗುಂಪೊಂದು ಆಗಮಿಸಿತು ಹಾಗೂ ದಾಂಧಲೆ ನಡೆಸಿತು. ಅನಂತರ ತನಗೆ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಹಲ್ಲೆ ನಡೆಸಿತು ಎಂದು ಪಾದ್ರಿ ಪರಾಸ್ತೆ ತಿಳಿಸಿರುವುದಾಗಿ ಕಬೀರ್ಧಾಮ್ನ ಪೊಲೀಸ್ ಅಧೀಕ್ಷಕ ಮೋಹಿತ್ ಗರ್ಗ್ ಹೇಳಿದ್ದಾರೆ. ಧಾರ್ಮಿಕ ಮತಾಂತರ ನಿಲ್ಲಿಸುವಂತೆ ಗುಂಪು ಘೋಷಣೆಗಳನ್ನು ಕೂಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಕೆಲವರನ್ನು ಗುರುತಿಸಿದ್ದೇವೆ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಗರ್ಗ್ ತಿಳಿಸಿದ್ದಾರೆ. ಕ್ರೈಸ್ತರ ಆರಾಧನಾ ಸ್ಥಳಗಳ ಮೇಲೆ ದಾಳಿ ಪ್ರಕರಣದ ಕುರಿತಂತೆ ರಾಜ್ಯ ಸರಕಾರ ಹಾಗೂ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಚತ್ತೀಸ್ಗಡದ ಕ್ರೈಸ್ತ ವೇದಿಕೆಯ ಅಧ್ಯಕ್ಷ ಅರುಣ್ ಪನ್ನಾಲಾಲ್ ಆರೋಪಿಸಿದ್ದಾರೆ.