ಇಂದಿನ ಐಕಾನ್ – ಶ್ರೀಮತಿ ಆಶಾದೇವಿ

 

 

 

“ಇದು ಭಾರತದ ಎಲ್ಲ ಹೆಣ್ಣು ಮಕ್ಕಳ ವಿಜಯ. ನನಗೆ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. Justice is DELAYED. But not DENIED” ಎಂದು ಆಕೆ ಇಂದು ಬೆಳಿಗ್ಗೆ ಮನೆಯ ಮುಂದೆ ನಿಂತು ಮಾಧ್ಯಮದ ಮಂದಿಯ ಮುಂದೆ ಮಾತಾಡುತ್ತಿದ್ದ ಕ್ಷಣ ತುಂಬಾ ನೋವಿನಿಂದ ಕೂಡಿತ್ತು ಮತ್ತು ಭಾವಪೂರ್ಣವಾಗಿತ್ತು. ಏಳು ವರ್ಷಗಳ ಅವರ ನ್ಯಾಯಾಂಗ ಹೋರಾಟಕ್ಕೆ ಅಂದು ನ್ಯಾಯ ಸಿಕ್ಕಿತ್ತು.” ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿತು” ಎಂದು ಆಕೆ ಸೆರಗಿನಿಂದ ಕಣ್ಣು ಒರೆಸಿಕೊಂಡರು. ಆಕೆ ನಿರ್ಭಯಾ ಅಮ್ಮ!

ಹೆಸರು ಶ್ರೀಮತಿ ಆಶಾದೇವಿ. ಗಟ್ಟಿಗಿತ್ತಿ ಮಹಿಳೆ.

 

2012 ಡಿಸೆಂಬರ್ 16ರಂದು ರಾತ್ರಿ 9-30ರ ಹೊತ್ತಿಗೆ ದಕ್ಷಿಣ ದೆಹಲಿಯ ಮುನಿರ್ಕಾ ಎಂಬ ಸ್ಥಳದಲ್ಲಿ ಬಸ್ಸಿನಲ್ಲಿದ್ದ 6 ಜನ ರಾಕ್ಷಸರು ಅವರ ಮಗಳ ಮೇಲೆ ಮಾಡಿದ ಅಮಾನುಷ ಮತ್ತು ಬರ್ಬರ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗೆ ಸ್ಫೂರ್ತಿ ಅವರೇ! ದೆಹಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಕ್ಯಾಂಡಲ್ ಲೈಟ್ ಮಾರ್ಚ್ ಮಾಡಿದಾಗ ಮುಂದೆ ನಿಂತು ಧ್ವನಿ ಎತ್ತಿದವರೇ ಈ ಮಹಾ ತಾಯಿ! ನಿರ್ಭಯಾ ಕೊನೆಯ ಉಸಿರಿಗಾಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವ ಸಂದರ್ಭದಲ್ಲೂ ಒಂದಿಷ್ಟು ಎದೆಗುಂದದೆ ನಿಂತವರು ಇದೇ ಆಶಾದೇವಿ.

 

“ನಮ್ಮ ಪ್ರೀತಿಯ ಮಗಳ ವಿದ್ಯಾಭ್ಯಾಸಕ್ಕಾಗಿ ನಮ್ಮ ಪಿತ್ರಾರ್ಜಿತ ಆಸ್ತಿ ಮಾರಿದ್ದೇವೆ. ನನ್ನ ಗಂಡ ಹಣ ಹೊಂದಿಸಲು ಎರಡು ಶಿಫ್ಟ್ ದುಡಿಯುತ್ತಿದ್ದರು. ನಿರ್ಭಯಾ ಕನಸೇ ನಮ್ಮ ಕನಸಾಗಿತ್ತು. ಆದರೆ ನಮಗಿಂದು ನ್ಯಾಯ ಸಿಕ್ಕಿದೆ” ಎಂದು ಅವರು ಹೇಳುವಾಗ ಯಾರ ಕರುಳಾದರೂ ಚುರುಕ್ ಅನ್ನದೆ ಇರದು. ಏಳು ವರ್ಷಗಳ ಕಾಲ ಕೋರ್ಟಿನಿಂದ ಕೋರ್ಟಿಗೆ ವಿಚಾರಣೆ ಶಿಫ್ಟ್ ಆದಾಗ, ಅತ್ಯಾಚಾರ ಮಾಡಿದ ರಾಕ್ಷಸರನ್ನು ಉಳಿಸಲು ಅನೇಕ ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸಿದಾಗ, ಅತ್ಯಾಚಾರಿ ಹುಡುಗರ ಕುಟುಂಬದವರು ಇಮೋಷನಲ್ ಬ್ಲಾಕ್ಮೇಲ್ ಆರಂಭಿಸಿದಾಗ, ಮೈನರ್ ಎಂಬ ಕಾರಣಕ್ಕೆ ಅತ್ಯಾಚಾರಿ ಹುಡುಗನ ಕಡೆಯವರು ರಕ್ಷಣೆ ಕೋರಿ ಕೋರ್ಟಿಗೆ ಅರ್ಜಿ ಹಾಕಿದಾಗ…. ಒಂದಿಷ್ಟೂ ವಿಚಲಿತರಾಗದೆ ಕಲ್ಲು ಬಂಡೆಯಂತೆ ನಿಂತವರು ಇದೇ ಆಶಾದೇವಿ! ‘ನಿಮ್ಮ ಮಗಳ ಅತ್ಯಾಚಾರಿಗಳನ್ನು ಕ್ಷಮಿಸಿಬಿಡಿ’ ಎಂದು ಒಬ್ಬ ರಾಜಕೀಯ ಪುಡಾರಿ ಪುಕ್ಕಟೆ ಸಲಹೆಯನ್ನು ನೀಡಿದಾಗ ಸಿಡಿದು ನಿಂತದ್ದು ಇದೇ ನಿರ್ಭಯಾ ಅಮ್ಮ!

 

ಆಕೆ ಇಂದು ಹೇಳಿದ ಕೊನೆಯ ಮಾತುಗಳು ತುಂಬಾ ಅರ್ಥಪೂರ್ಣ ಅಂತ ನನಗೆ ಅನ್ನಿಸಿತ್ತು.                             ”

ಪ್ರತಿಯೊಂದು ಹೆಣ್ಣಿಗೂ ಅನ್ಯಾಯವಾದಾಗ ಆಕೆಯ ಕುಟುಂಬ ಮಗಳ ಜೊತೆಗೆ ನಿಂತು ಬಿಡಬೇಕು. ಕಾನೂನಿನ ರಕ್ಷಣೆ ಪಡೆಯಲು ಹೆದರಬಾರದು. ನಮ್ಮ ದೇಶದಲ್ಲಿ ಅತ್ಯಾಚಾರ ಪ್ರತಿಬಂಧಕ ಕಾನೂನುಗಳು ಇನ್ನಷ್ಟು ಹರಿತ ಆಗಬೇಕು. ಕಾಲ ನಿರ್ಧಾರಿತವಾಗಿ ಅತ್ಯಾಚಾರ ಅಪರಾಧಿಗಳಿಗೆ ಶಿಕ್ಷೆ ನೀಡುವ ಅಧಿಕಾರ ನ್ಯಾಯಾಂಗಕ್ಕೆ ದೊರೆಯಬೇಕು. ಈ ಬಗ್ಗೆ ನನ್ನ ಹೋರಾಟ ನಿರಂತರ ಮುಂದುವರೆಯುತ್ತದೆ” ಎಂದಾಕೆ ನುಡಿದಾಗ ಅವರ ಕಣ್ಣಲ್ಲಿ ನೀರಿತ್ತು. ನನಗೂ ಕಣ್ಣೀರು ತಡೆಯುವುದು ಬಹಳ ಕಷ್ಟವಾಯಿತು.

 

ಇಡೀ ದೇಶದಾದ್ಯಂತ ಹರಡಿದ ಹೋರಾಟದ ಮಾರ್ಗದಲ್ಲಿ ರಾಜಕೀಯದ ಶಕ್ತಿಗಳು ಮೂಗು ತೂರಿಸದ ಹಾಗೆ ನೋಡಿಕೊಂಡ ಅವರ ಜಾಣ್ಮೆ ಅದ್ಭುತ. ಇಡೀ ದೇಶವೇ ಸ್ಪಂದಿಸಿದ, ಕುತೂಹಲದಿಂದ ಕಾಯುತ್ತಿದ್ದ ನಿರ್ಭಯಾ ಅತ್ಯಾಚಾರದ ಪ್ರಕರಣಕ್ಕೆ ಕೊನೆಗೂ ಪೂರ್ಣವಿರಾಮ ದೊರೆತಿದೆ. ಇಡೀ ಹೋರಾಟದ ಸ್ಫೂರ್ತಿ ದೇವತೆ ಆಶಾದೇವಿ ಎನ್ನುವುದರಲ್ಲಿ ಎರಡು ಮಾತಿಲ್ಲ.

 

ಜಗತ್ತಿನ ಯಾವ ಹೆಣ್ಣು ಮಗುವೂ ನಿರ್ಭಯಾ ಹಾಗೆ ಕಷ್ಟ ಪಡುವುದು ಬೇಡ. ಆದರೆ ಪ್ರತಿಯೊಂದು ಹೆಣ್ಣು ಮಗುವಿನ ಅಮ್ಮ ಕೂಡ ಆಶಾದೇವಿ ಆಗಿರಲಿ ಎನ್ನುವುದೇ ನನ್ನ ಅಭಿಪ್ರಾಯ.

Leave a Reply

Your email address will not be published. Required fields are marked *

You cannot copy content of this page

error: Content is protected !!