ಅಡಿಕೆ ಬೆಳೆಗೆ ಏರಿದ ಬೆಲೆ : ಕೃಷಿಕರು ಫುಲ್ ಖುಷ್
ಅಡಿಕೆ ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಶತಮಾನಗಳಿಂದ ಅಡಿಕೆ ಬೆಳೆಯುತ್ತಿರುವ ಇಲ್ಲಿನ ಕೃಷಿಕರಿಗೆ ಅಡಿಕೆ ಮೊದಮೊದಲು ಉಪ ಬೆಳೆಯಾಗಿತ್ತು. ನಂತರದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟು ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ಮೂಲಕ ಅಡಿಕೆ ಕೊಳ್ಳುವಿಕೆ, ಶೇಖರಣೆ ಮತ್ತು ವ್ಯಾಪಾರ ನಡೆಯುತ್ತಿದೆ. ಇತ್ತೀಚಿನ ಎರಡು ವರ್ಷಗಳಲ್ಲಿ ಅಡಿಕೆ ಬೆಲೆಯಲ್ಲಿ ಹೆಚ್ಚಳ ಕಂಡಿದ್ದು, ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯನ್ನು ಹೊಂದಿದೆ. ಅಡಿಕೆಯು ಫಲೋತ್ಪನ್ನವಲ್ಲದಿದ್ದರೂ, ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ವಿವಾಹ ಸಮಾರಂಭಗಳಲ್ಲಿ ತಾಂಬೂಲದ ಪ್ರಮುಖ ಭಾಗವಾಗಿದೆ.
ಅಗಿದು, ಜಗಿದು, ಉಗಿಯಲು ಬಳಸುವ ಅಡಿಕೆ ಎಂಬ ವಾಣಿಜ್ಯ ಬೆಳೆಗೆ ಭವಿಷ್ಯವಿಲ್ಲ ಎನ್ನುವವರು ಇದ್ದರು. ಉತ್ತರ ಭಾರತದ ರಾಜ್ಯಗಳಲ್ಲಿ ಯಥೇಚ್ಛವಾಗಿ ಮಾರಾಟವಾಗುವ ಅಡಿಕೆಗೆ ವಿದೇಶಗಳಲ್ಲೂ ಬೇಡಿಕೆಯಿದೆ. ಅಡಿಕೆಗೆ ತನ್ನದೇ ಆದ ಮಾರುಕಟ್ಟೆ ವ್ಯವಸ್ಥೆಯಿದ್ದು, ಅಡಿಕೆ ಕೃಷಿ ಕರಾವಳಿ ಭಾಗದ ರೈತರ ಪ್ರಮುಖ ಜೀವನಾಧಾರವಾಗಿದೆ. 2014 ರಲ್ಲಿ ಅಡಿಕೆ ಬೆಳೆಗಾರರ ಹಿತ ರಕ್ಷಣೆಯ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಂತರ ಕರಾವಳಿ ಭಾಗದ ಮೀನುಗಾರರ ಹಿತರಕ್ಷಣೆಯ ಬಗ್ಗೆಯೂ ಅಂದಿನ ಚುನಾವಣಾ ಪೂರ್ವ ರ್ಯಾ ಲಿಗಳಲ್ಲಿ ಮಾತನಾಡಿದ್ದರು. ಪ್ರಸ್ತುತ 7 ವರ್ಷಗಳ ತರುವಾಯು ಕರಾವಳಿಯ ಹಲವೆಡೆ ಕೇಂದ್ರ ಹಾಗೂ ರಾಜ್ಯ ಸರಕಾರದ ನೆರವಿನೊಂದಿಗೆ ಮೀನುಗಾರಿಕಾ ಬಂದರುಗಳನ್ನು ನಿರ್ಮಿಸಲಾಗಿದ್ದು, ಸಾಗರಮಾಲ ಯೋಜನೆಯ ಮೂಲಕ ಬಂದರುಗಳ ಪರಸ್ಪರ ಜೋಡಣೆ ಮೂಲಕ ಕರಾವಳಿಯ ವ್ಯಾಪಾರ, ಮೀನುಗಾರರ ಆರ್ಥಿಕತೆಯ ಏಳಿಗೆಯ ಲಕ್ಷ್ಯವನ್ನಿರಿಸಲಾಗಿದೆ.
ಅಡಿಕೆ ಧಾರಣೆಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲೂ ಕಡಿಮೆಯಾಗದೇ ಉಳಿದು, ನಂತರದ ದಿನಗಳಲ್ಲಿ ಧಾರಣೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಸುಮಾರು 350 ರಿಂದ 390 ರೂ. ವರೆಗೆ ತಲುಪಿದ ಹೊಸ ಅಡಿಕೆ ಧಾರಣೆಯಿಂದ ಅಡಿಕೆ ಬೆಳೆಗಾರರು ಖುಷಿಯಾಗಿದ್ದಾರೆ.
ಈ ಹಿಂದೆ ವಿದೇಶಗಳಿಂದ ಅದರಲ್ಲೂ ಮಲೇಷ್ಯಾದಿಂದ ದೇಶಕ್ಕೆ ರಫ್ತಾಗುತ್ತಿದ್ದ ಅಡಿಕೆಗೆ ಹೆಚ್ಚಿನ ಸುಂಕ ಬಿದ್ದದ್ದು ಮಾತ್ರವಲ್ಲದೆ ಅಲ್ಲಿಂದ ದೇಶದೊಳಗೆ ದಾಟುತ್ತಿದ್ದ ಅಡಿಕೆಗೆ ಬ್ರೇಕ್ ಬಿದ್ದಿದೆ. ಅಡಿಕೆ ಬೆಳೆಯುವ ನೆರೆಯ ರಾಷ್ಟ್ರಗಳಲ್ಲೂ ಮಾರುಕಟ್ಟೆ ಬೆಲೆ ಹೆಚ್ಚಾಗಿದ್ದು, ಕೃಷಿಕರು ಸಂತುಷ್ಟರಾಗಿದ್ದಾರೆ.
ಕಳೆದ ಬಾರಿ ಮೇ ತಿಂಗಳಲ್ಲಿ ಒಣಗಿದ ಹೊಸ ಅಡಿಕೆ ಬೆಲೆಯು ಕಿ.ಗ್ರಾಂಗೆ 290 ರೂ.ರಿಂದ 330 ರೂ.ಗಳಿತ್ತು. ಇತ್ತೀಚಿಗಿನ ದಿನಗಳಲ್ಲಿ ದಿನವೊಂದಕ್ಕೆ 5 ರಿಂದ 10 ರೂ. ಗಳಂತೆ ಅಡಕೆ ಧಾರಣೆ ಹೆಚ್ಚಳ ಕಂಡಿದ್ದು ಪ್ರಸ್ತುತ 385 ರೂ. ವಿನಿಂದ 440 ರೂ. ವರೆಗೆ ಏರಿದೆ. ಉತ್ತರ ಭಾರತದ ಗುಜರಾತ್, ರಾಜಸ್ಥಾನ ಸಹಿತ ಬಿಹಾರ, ಉ.ಪ್ರಗಳಲ್ಲಿ ಅಡಿಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಧಾರಣೆಯು ಹೆಚ್ಚಿದೆ. ಈ ಬಾರಿ ಒಟ್ಟಾರೆ ಬೆಳೆ ಪ್ರಮಾಣವು ಕಡಿಮೆ ಇರುವ ಕಾರಣ ಧಾರಣೆಯಲ್ಲಿ ಹೆಚ್ಚಳ ಕಂಡು ಬಂದಿರಬಹುದೆಂದು ಅಂದಾಜಿಸಲಾಗಿದೆ.
ವಿಧಾನಸಭೆಯಲ್ಲೂ ಅಡಿಕೆ ಸದ್ದು
ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಅಧಿವೇಶನದಲ್ಲೂ ಅಡಿಕೆ ಸದ್ದು ಮಾಡಿತ್ತು. ಈ ಹಿಂದೆ ಅಡಿಕೆ ಮಾದಕ ದ್ರವ್ಯಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ದೊಡ್ಡ ಪ್ರಮಾದವಾಗಿತ್ತು, ನಂತರದಲ್ಲಿ ಇದನ್ನು ಸರಿಪಡಿಸಲಾಗಿದೆ ಎಂದು ಗೃಹಸಚಿವ ಬಸವರಾಜ್ ಪಾಟೀಲ್ ಉತ್ತರಿಸಿದ್ದರು. ಕರ್ನಾಟಕದ ಒಟ್ಟು 11 ಜಿಲ್ಲೆಗಳಲ್ಲಿ ಅಡಿಕೆ ಬೆಳೆಸಲಾಗುತ್ತಿದ್ದು, ಸಣ್ಣ ಪ್ರಮಾದದಿಂದ ಅಡಿಕೆಯ ಒಟ್ಟಾರೆ ಧಾರಣೆಯಲ್ಲಿ ಕುಸಿತ ಕಂಡು ಕೃಷಿಕರು ಸಂದಿಗ್ಧತೆಗೆ ಒಳಗಾಗಿದ್ದರು ಎಂದು ಇತರೆ ಸದಸ್ಯರು ದನಿ ಎತ್ತಿದ್ದರು. ಇದೀಗ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದು ಮುಖ್ಯವಾಗಿ ಕರಾವಳಿ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಬಹುದು.