ರಾಜ್ಯದ ಜನರ ವಿಶ್ವಾಸ ಗಳಿಸುವಲ್ಲಿ ರಾಜ್ಯ ಸರ್ಕಾರ ವಿಫಲ_ ರಣದೀಪ್ ಸುರ್ಜೆವಾಲಾ

ರಾಜ್ಯದ ಜನರ ವಿಶ್ವಾಸ ಗಳಿಸುವಲ್ಲಿ ರಾಜ್ಯ ಸರ್ಕಾರ ವಿಫಲ -ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ

 

ತುಮಕೂರು, ಜು. 25- ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯ-ಗತಾಯ ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಕಲ್ಪತರುನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಪಂಚ ಜಿಲ್ಲೆಗಳ ಕೈ ನಾಯಕರ ವಿಭಾಗೀಯ ಮಟ್ಟದ ಸಭೆ ನಡೆಸಿ, ತಳಮಟ್ಟದಿಂದ ಪಕ್ಷ ಸಂಘಟಿಸುವ ಮೂಲಕ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ನಗರದ ಹೊರವಲಯದ ಅರ್ಬನ್ ರೆಸಾರ್ಟ್‌ನಲ್ಲಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ಪಂಚ ಜಿಲ್ಲೆಗಳ ಕೈ ನಾಯಕರ ವಿಭಾಗೀಯ ಮಟ್ಟದ ಸಭೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದಿದ್ದು, ಯಾವ ಜಿಲ್ಲೆಯಲ್ಲಿ, ಯಾವ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ನಡುವೆ ಭಿನ್ನಮತ, ಸಂಘಟನೆ ಕೊರತೆ, ಸಮನ್ವಯ ಕೊರತೆ, ಅಸಮಾಧಾನಗಳು ಇವೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿ, ಇವೆಲ್ಲವುಗಳ ಶಮನಕ್ಕೆ ಮದ್ದು ಅರೆಯಲಾಯಿತು.

 

ಪಂಚ ಜಿಲ್ಲೆಗಳ ವಿಭಾಗೀಯ ಮಟ್ಟದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಈಶ್ವರಖಂಡ್ರೆ, ದ್ರುವನಾರಾಯಣ, ಶಾಸಕ ವೆಂಕಟರಮಣಪ್ಪ, ಡಾ. ರಂಗನಾಥ್, ಮಾಜಿ ಶಾಸಕರಾದ ಟಿ.ಬಿ. ಜಯಚಂದ್ರ, ಕೆ.ಎನ್. ರಾಜಣ್ಣ, ಡಾ. ರಫೀಕ್ಅಹಮದ್, ಕೆ. ಷಡಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮುರುಳೀಧರ ಹಾಲಪ್ಪ ಸೇರಿದಂತೆ 5 ಜಿಲ್ಲೆಗಳ ಪ್ರಮುಖ ನಾಯಕರುಗಳು ಭಾಗವಹಿಸಿದ್ದರು.

 

 

ಕಾಂಗ್ರೆಸ್ ಪಕ್ಷ ಭದ್ರವಾಗಿ ನೆಲೆಯೂರಿ ನಂತರ ನೆಲೆ ಕಳೆದುಕೊಳ್ಳುತ್ತಿರುವ ಜಿಲ್ಲೆಗಳು, ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ತುರ್ತಾಗಿ ಕೈಗೊಳ್ಳಬೇಕಾಗಿರುವ ರಣತಂತ್ರಗಳ ಬಗ್ಗೆಯೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪಕ್ಷದ ಮುಖಂಡರುಗಳಿಗೆ ತಿಳಿಸಿದರು.

ಪಂಚ ಜಿಲ್ಲೆಗಳಲ್ಲಿ ಸ್ಥಳೀಯ ಪ್ರಭಾವಿ ನಾಯಕರುಗಳ ನಡುವೆ ಇರುವ ಮುನಿಸು, ಭಿನ್ನಮತಗಳನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಮುಂದಾಗುವಂತೆ ಅವರು ಸೂಚನೆ ನೀಡಿದರು.

ಪಕ್ಷವನ್ನು ಗ್ರಾಮ ಮಟ್ಟ, ಬೂತ್ ಮಟ್ಟ, ಹೋಬಳಿ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಬಲವರ್ಧನೆಗೊಳಿಸುವ ಕುರಿತು ಆಯಾ ಜಿಲ್ಲೆಗಳ ಮುಖಂಡರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಲಹೆಗಳನ್ನು ಪಡೆಯಲಾಯಿತು.

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕುರಿತು ಕೈಗೊಳ್ಳಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆಯೂ 5 ಜಿಲ್ಲೆಗಳ ನಾಯಕರುಗಳೊಂದಿಗೆ ಪ್ರತ್ಯೇಕವಾಗಿ ಸುರ್ಜೇವಾಲಾ ಅವರು ಚರ್ಚೆ ನಡೆಸಿದರು.

ಕೆಲ ಜಿಲ್ಲೆಗಳಲ್ಲಿ ಪಕ್ಷದ ಜಿಲ್ಲಾಧ್ಯಕ್ಷರುಗಳ ಬದಲಾವಣೆಯಾಗಬೇಕಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಜಿಲ್ಲಾಧ್ಯಕ್ಷರು ಆದವರು ವಿಧಾನಸಭಾ ಚುನಾವಣೆಗೆ ಟಿಕೆಟ್ ಕೇಳುವಂತಿಲ್ಲ ಎಂಬ ಪ್ರಸ್ತಾಪ ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ ಹಾಲಿ ಮತ್ತು ಮಾಜಿ ಶಾಸಕರುಗಳು ಜಿಲ್ಲಾಧ್ಯಕ್ಷ ಹುದ್ದೆ ಅಲಂಕರಿಸಲು ಹಿಂದೇಟು ಹಾಕುತ್ತಿರುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗಳು ನಡೆದವು.

ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಸಾಮರ್ಥ್ಯ ಇರುವ ನಾಯಕರು ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸುವುದು ಅನಿವಾರ್ಯ. ಹಾಗಾಗಿ ವಿಧಾನಸಭಾ ಚುನಾವಣೆಯ ಟಿಕೆಟ್‌ವೊಂದನ್ನೆ ಗಮನದಲ್ಲಿಟ್ಟುಕೊಳ್ಳದೆ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ನಾಯಕರು ಮುಂದಾಗುವಂತೆಯೂ ಸುರ್ಜೇವಾಲಾ ಅವರು ಕರೆ ನೀಡಿದರು.

ಪಂಚ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯ-ಗತಾಯ ಅಧಿಕಾರಕ್ಕೆ ತರಲೇಬೇಕು. ಈ ಮೂಲಕ ರಾಜ್ಯದಲ್ಲೂ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವಂತೆ ಮಾಡಲು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಹಾಗಾಗಿ ಪಕ್ಷಕ್ಕೆ ಅಧಿಕಾರ ದೊರಕಿಸಿಕೊಡುವುದು ನಮ್ಮೆಲ್ಲ ಕರ್ತವ್ಯ. ಈ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷದ ಬಲವರ್ಧನೆಗೆ ಮುಂದಾಗುವಂತೆ ಅವರು ಪಕ್ಷದ ಮುಖಂಡರುಗಳಿಗೆ ತಾಕೀತು ಮಾಡಿದರು.

ಬೆಳಿಗ್ಗೆಯಿಂದ ಸಂಜೆವರೆಗೂ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಕಾಂಗ್ರೆಸ್ ನಾಯಕರು, ಮುಖಂಡರುಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಪಕ್ಷದ ಬಲವರ್ಧನೆ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಿ, ಕಾರ್ಯತಂತ್ರಗಳನ್ನು ರೂಪಿಸುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ಆಯಾ ಜಿಲ್ಲೆಗಳ ಸ್ಥಳೀಯ ನಾಯಕರುಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಭವ್ಯ ಸ್ವಾಗತ

ಪಂಚ ಜಿಲ್ಲೆಗಳ ವಿಭಾಗೀಯ ಮಟ್ಟದ ಸಭೆಗೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಜಿಲ್ಲಾ ಕಾಂಗ್ರೆಸ್ ನಾಯಕರಿಂದ ಭವ್ಯ ಸ್ವಾಗತ ದೊರೆಯಿತು.

ಕ್ಯಾತ್ಸಂದ್ರ ಸರ್ಕಲ್‌ನಲ್ಲಿ ಬೃಹತ್ ಹಾರವನ್ನು ಜೆಸಿಬಿ ಯಂತ್ರದ ಮೂಲಕ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಆರ್. ರಾಜೇಂದ್ರ ಅವರು ಸುರ್ಜೇವಾಲಾ ಅವರ ಕೊರಳಿಗೆ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ, ಸಭೆ ನಡೆಯುವ ಸ್ಥಳಕ್ಕೆ ಕರೆದೊಯ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!