ರಾಜಸ್ಥಾನದಲ್ಲಿ ಗ್ರಾಮೀಣ ಪಂಚಾಯತ್ ಚುನಾವಣೆ: ಆರು ವರ್ಷಗಳ ಬಳಿಕ ಬಿಜೆಪಿಯನ್ನು ಹಿಂದಿಕ್ಕಿದ ಕಾಂಗ್ರೆಸ್
ಜೈಪುರ, ಸೆ.5: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷದ ಹೊರತಾಗಿಯೂ, ಗ್ರಾಮೀಣ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಆರು ಜಿಲ್ಲೆಗಳ 1,564 ಸ್ಥಾನಗಳ ಪೈಕಿ ಕಾಂಗ್ರೆಸ್ 670 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 551ಕ್ಕೆ ತೃಪ್ತಿಪಟ್ಟುಕೊಂಡಿದೆ. 2015ರ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕೂಡಾ ಇದೇ ಪ್ರವೃತ್ತಿ ಕಂಡುಬಂದಿದ್ದು, 200 ಸ್ಥಾನಗಳ ಪೈಕಿ ಕಾಂಗ್ರೆಸ್ 99 ಹಾಗೂ ಬಿಜೆಪಿ 90 ಸ್ಥಾನ ಪಡೆದಿವೆ.
ಹಿಂದಿನ ಚುನಾವಣೆಯಲ್ಲಿ 1,328 ಪಂಚಾಯ್ತಿ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 585 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಒಟ್ಟು ಸ್ಥಾನಗಳ ಸಂಖ್ಯೆ 1564ಕ್ಕೆ ಹೆಚ್ಚಿದ್ದರೂ, ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 100 ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ಗೆದ್ದರೆ, 90 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.
ಪಕ್ಷೇತರರು 290 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದಿದ್ದು, ರಾಷ್ಟ್ರೀಯ ಲೋಕ ತಾಂತ್ರಿಕ ಪಾರ್ಟಿ (ಆರ್‌ಎಲ್‌ಪಿ) ಕೇವಲ 40 ಹಾಗೂ ಬಿಎಸ್‌ಪಿ 11 ಸ್ಥಾನಗಳಲ್ಲಷ್ಟೇ ಗೆದ್ದಿವೆ. ಎರಡು ಸ್ಥಾನಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಮೂರು ಹಂತಗಳಲ್ಲಿ ಜೈಪುರ, ಜೋಧಪುರ, ಭರತ್‌ಪುತ, ಸವಾಯಿ ಮಾಧವಪುರ, ದವೂಸಾ ಮತ್ತು ಸಿರೋಹಿ ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಶೇಕಡ 64ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. ಆರು ಜಿಲ್ಲಾ ಪ್ರಮುಖರು ಹಾಗೂ ಉಪ ಜಿಲ್ಲಾ ಪ್ರಮುಖರ ಹುದ್ದೆಗಳಿಗೆ ಮತ್ತು 78 ಪ್ರಧಾನ ಮತ್ತು ಉಪಪ್ರಧಾನ ಹುದ್ದೆಗಳಿಗೂ ಚುನಾವಣೆ ನಡೆದಿತ್ತು.