ರೈಲು ದುರಂತ ಸಂತ್ರಸ್ತನನ್ನು ಕುಟುಂಬದ ಜತೆ ಸೇರಿಸಿದ ಮಸೀದಿ ಧ್ವನಿವರ್ಧಕ!
ಗುವಾಹತಿ: ಮಸೀದಿಯಲ್ಲಿ ನಮಾಝ್ ಸಂದರ್ಭದಲ್ಲಿ ಬಳಸುವ ಧ್ವನಿವರ್ಧಕ, ಪಶ್ಚಿಮ ಬಂಗಾಳ ರೈಲು ದುರಂತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂನ ತನ್ನ ಕುಟುಂಬದ ಜತೆ ಸೇರಿಸಲು ನೆರವಾದ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ.
ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಗಾಯಗೊಂಡವರಲ್ಲಿ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸೈಫಿಕುಲ್ ಅಲಿ ಕೂಡಾ ಒಬ್ಬರು. ಒಂಬತ್ತು ಜೀವಗಳನ್ನು ಬಲಿ ಪಡೆದ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಅಲಿ, ಜಲಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಆಸ್ಪತ್ರೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣೊವ್ ಕೂಡಾ ಶುಕ್ರವಾರ ಭೇಟಿ ನೀಡಿದ್ದರು.
ಅಲಿ ಅಥವಾ ಅಲಿ ಕುಟುಂಬಕ್ಕೆ ಮೊಬೈಲ್ ಇಲ್ಲದ ಕಾರಣ ಅಲಿಗೆ ತಮ್ಮ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂಬ ವಿಚಾರ ಅಲಿ ಅವರ ಆರೋಗ್ಯ ವಿಚಾರಿಸುವ ವೇಳೆ ಸಚಿವರಿಗೆ ತಿಳಿದು ಬಂತು. ಪಕ್ಕದ ಮನೆಯವರ ಫೋನ್ ನಂಬರ್ ಇದೆ ಎಂದು ಅಲಿ ಈ ಸಂದರ್ಭದಲ್ಲಿ ತಿಳಿಸಿದಾಗ, ಆ ವ್ಯಕ್ತಿಯ ಫೋನ್ಗೆ ವೈಷ್ಣವ್ ಕರೆ ಮಾಡಿದರು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಅಲಿಯ ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಸಚಿವರು ವ್ಯವಸ್ಥೆ ಮಾಡಿದ ಅಂಚೆಪೇದೆಗೂ ಮನೆಯವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ಕುಟುಂಬವನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾದಾಗ, ಗ್ರಾಮದ ಮಸೀದಿಯಲ್ಲಿ ನಮಾಝ್ ಗಾಗಿ ಬಳಸುವ ಧ್ವನಿವರ್ಧಕದಲ್ಲಿ ಈ ಪ್ರಕಟಣೆ ನೀಡಲಾಯಿತು. ಈ ಘೋಷಣೆಯ ಮೂಲಕ ಅಲಿ ಕುಟುಂಬದವರಿಗೆ ಅಲಿ ಆರೋಗ್ಯಸ್ಥಿತಿ ಬಗ್ಗೆ ಮಾಹಿತಿ ಸಿಕ್ಕಿ, ರೈಲು ಅಧಿಕಾರಿಗಳ ಜತೆ ಕುಟುಂಬದವರು ಸಂಪರ್ಕ ಸಾಧಿಸಿದರು ಎಂದು ವಿವರಿಸಿದ್ದಾರೆ.
ಅಲಿಯವರ ಅಣ್ಣ ಇದೀಗ ಜಲಪೈಗುರಿಗೆ ಆಗಮಿಸುತ್ತಿದ್ದಾರೆ. ಜಲಪೈಗುರಿ ಜಿಲ್ಲೆಯ ದೊಮೊಹನಿ ಸಮೀಪ ರೈಲಿನ 12 ಬೋಗಿಗಳು ಹಳಿ ತಪ್ಪಿ 9 ಮಂದಿ ಮೃತಪಟ್ಟು 36 ಮಂದಿ ಗಾಯಗೊಂಡಿದ್ದರು.