ನಾನು ಕ್ಷೇತ್ರದ ಶಾಸಕನಲ್ಲ ನಿಮ್ಮ ಮನೆಯ ಮಗ ಆಶೀರ್ವದಿಸಿ ಗೆಲ್ಲಿಸಿ ತುಮಕೂರು ಗ್ರಾಮಾಂತರ ಶಾಸಕ -ಡಿ.ಸಿ ಗೌರಿ ಶಂಕರ್
ತುಮಕೂರು -ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿಗಳು ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ನಾಮಪತ್ರ ಸಲ್ಲಿಕೆಗೂ ಮೊದಲು ಮನೆದೇವರಾದ ಹದ್ದಿನ ಕಲ್ಲು ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು .ಬಳಿಕ ಭೈರನಾಯಕನಹಳ್ಳಿಯ ತಮ್ಮ ಮನೆಗೆ ಭೇಟಿ ನೀಡಿ ತಾಯಿ ಸಿದ್ದಗಂಗಮ್ಮ ಅವರ ಆಶೀರ್ವಾದ ಪಡೆದರು, ಬಳಿಕ ಸಿದ್ದಗಂಗಾ ಮಠಕ್ಕೆ ತೆರಳಿ ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ ಪೂಜೆ ಸಲ್ಲಿಸಿ ನಂತರ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಗ್ರಾಮಾಂತರ ಕ್ಷೇತ್ರದ ಗುಳೂರು ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗೂಳೂರು ಸರ್ಕಲ್ ನಿಂದ 5,000ಕ್ಕೂ ಹೆಚ್ಚು ಬೈಕ್ ಗಳಲ್ಲಿ ಕಾರ್ಯಕರ್ತರು ಡಿ ಸಿ ಗೌರಿಶಂಕರ್ ಅವರನ್ನು ತುಮಕೂರು ನಗರದವರೆಗೂ ಮೆರವಣಿಗೆಯಲ್ಲಿ ಕರೆತಂದರು ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ನಿಂದ ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಹಾಗೂ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಮಾತನಾಡಿ ನಾನು ಗ್ರಾಮಾಂತರದ ಕ್ಷೇತ್ರದ ಶಾಸಕನಲ್ಲ, ನಿಮ್ಮ ಮನೆ ಮಗ ಐದು ವರ್ಷಗಳಿಂದ ನಿಮ್ಮ ಜೊತೆ ಇದ್ದೇನೆ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ ಚುನಾವಣೆ ಬಂದಾಗ ಸುಳ್ಳು ಹೇಳಿ ಗಿಮಿಕ್ ಮಾಡುವವರನ್ನು ನಂಬಬೇಡಿ,ಹತ್ತು ವರ್ಷ ಗ್ರಾಮಾಂತರ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀಯ ಎಂದು ಮಾಜಿ ಶಾಸಕ ಸುಳ್ಳೇಶ್ವರನನ್ನು ಕಾರ್ಯಕರ್ತರು ಪ್ರಶ್ನೆ ಮಾಡಿ, ಅಮಾಯಕರ ಮೇಲೆ ಕೇಸು ಹಾಕಿಸಿರುವುದೇ ಅವರ ಸಾಧನೆ ,ನಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಹರಿಹಾಯ್ದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಇತಿಹಾಸ ಸೃಷ್ಟಿಯಾಗುವಂತ ಗೆಲುವು ಸಿಗಬೇಕು,ಇಲ್ಲಿ ಕಾರ್ಯಕರ್ತರು ಹಾಗೂ ನಾಯಕರ ನಡುವೆ ಯುದ್ದ ನಡೆಯುತ್ತಿದೆ ,ಧರ್ಮ ಹಾಗೂ ಅಧರ್ಮದ ಜೊತೆ ಯುದ್ದವಾಗುತ್ತಿದೆ,ಧರ್ಮಕ್ಕೆ ಗೆಲುವು ಸಿಗುವವರೆಗೂ ಹೋರಾಡೋಣ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಅಕ್ಕಿ ,ಬೇಳೆ,ಗ್ಯಾಸ್,ಅಡುಗೆ ಎಣ್ಣೆ,ರಸಗೊಬ್ಬರ ಎಲ್ಲವೂ ದುಬಾರಿಯಾಗಿದೆ ಡಬ್ಬಲ್ ಇಂಜಿನ್ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಬೀದಿ ಪಾಲಾಗಿದೆ,ಬಿಜೆಪಿ ಕಾರ್ಯಕರ್ತರ ದಬ್ಬಾಳಿಕೆಗೆ ಜೆಡಿಎಸ್ ಕಾರ್ಯಕರ್ತರು ಹೆದರಬೇಡಿ,ಪ್ರತಿ ಬೂತ್ ನಲ್ಲಿ ಜೆಡಿಎಸ್ ಲೀಡ್ ಬರಬೇಕು,ಈಗ ಹೋಬಳಿಗೊಂದು ಪೊಲೀಸ್ ಸ್ಟೇಷನ್ ಗಳಿವೆ ನೀವು ಎಚ್ಚರ ತಪ್ಪಿದರೆ ಪಂಚಾಯ್ತಿಗೊಂದು ಸ್ಟೇಷನ್ ಗಳಾಗುತ್ತವೆ ಎಚ್ಚರ ತಪ್ಪಬೇಡಿ,ನಾನು ಕೋರ್ಟ್ ವಿಚಾರವಾಗಿ ಎರಡು ದಿನ ಕ್ಷೇತ್ರದಲ್ಲಿರಲಿಲ್ಲ ಆಗ ಸಾವಿರಾರು ಜನ ಕಣ್ಣೀರು ಹಾಕಿದ್ರಿ,ಒಂದು ವೇಳೆ ನಾನುಕ್ಷೇತ್ರದಲ್ಲಿ ಇಲ್ಲದೇ ಹೋದರೆ ನಿಮ್ಮ ಕಥೆ ಏನಾಗಬಹುದು ,ಇದಕ್ಕೆ ಆಸ್ಪದ ಕೊಡಬೇಡಿ ಎಂದರು.
ಕಾರ್ಯಕರ್ತರು ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷ ಸಂಘಟನೆ ಮಾಡಿ, ಗೌರೀಶಂಕರ್ ಈ ಭಾರಿ ಗೆದ್ದರೆ ಸಚಿವರನ್ನಾಗಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ,ಇದನ್ನು ತಪ್ಪಿಸಲು ಕುತಂತ್ರಿಗಳು ರಣತಂತ್ರ ರೂಪಿಸುತ್ತಿದ್ದಾರೆ,ಜೆಡಿಎಸ್ ಕಾರ್ಯಕರ್ತರು ಎಚ್ಚರ ತಪ್ಪಬೇಡಿ ಎಂದು ಮನವಿ ಮಾಡಿದರು.
ಕುಮಾರಣ್ಣನ ಪಂಚರತ್ನ ಯೋಜನೆಗಳ ಭಿತ್ತಿಪತ್ರಗಳನ್ನು ಮನೆ ಮನೆಗೆ ತಲುಪಿಸಿ,ಮನೆ ಮನೆ ಸುತ್ತಿ ಪ್ರಚಾರ ಮಾಡಿ ಅತೀ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಲು ನಿಮ್ಮ ಸಹಕಾರ ಅಗತ್ಯ ಎಂದರು.
ನಾಮಪತ್ರ ಸಲ್ಲಿಸುವ ವೇಳೆ ಡಿ.ಸಿ ಚಿಕ್ಕಣ್ಣ ಸ್ವಾಮಿ ಪ್ರಧಾನ ಅರ್ಚಕರಾದ ಪಾಪಣ್ಣ ಸ್ವಾಮಿ,ವೇಣುಗೋಪಾಲ್,ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಆಂಜಿನಪ್ಪ, ಗೂಳೂರು ಜಿಲ್ಲಾಪಂಚಾಯ್ತಿ ಉಸ್ತುವಾರಿ ಜಿ. ಪಾಲನೇತ್ರಯ್ಯ,ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್,ಬೆಳಗುಂಬ ಜಿಲ್ಲಾಪಂಚಾಯ್ತಿ ಉಸ್ತುವಾರಿ ಎನ್ ಆರ್ ಹರೀಶ್, ಮಾಜಿ ಉಪಮೇಯರ್ ಟಿ ಆರ್ ನಾಗರಾಜು,ಎಪಿಎಂಸಿ ಮಾಜಿ ಉಪಾಧ್ಯಕ್ಷೆ ವಿಜಯಕುಮಾರಿ,ಜೆಡಿಎಸ್ ಮುಖಂಡರಾದ ಬೆಳಗುಂಬ ವೆಂಕಟೇಶ್,ಹರಳೂರು ಪ್ರಕಾಶ್,ಗೌರೀಶಂಕರ್ ಅಭಿಮಾನಿ ಬಳಗದ ಅಧ್ಯಕ್ಷ ಗೂಳೂರು ಪುಟ್ಟರಾಜು ಸೇರಿದಂತೆ ಗ್ರಾಮಾಂತರ ಭಾಗದ ಸಾವಿರಾರು ಜೆಡಿಎಸ್ ಮುಖಂಡರು,ಕಾರ್ಯಕರ್ತರು ಉಪಸ್ತಿತರಿದ್ದರು.