ಕಾಂಗ್ರೆಸ್ ಗೂಡು ಸೇರಿದ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್ ಹಾಗೂ ನಿಂಗಪ್ಪ
ತುಮಕೂರಿನ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾಜಿ ಶಾಸಕ, ಬಿಜೆಪಿಯ ಕಿರಣ್ ಕುಮಾರ್ ಮತ್ತು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಇದೇ ವೇಳೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಮೈಸೂರಿನ ಸಂದೇಶ್ ನಾಗರಾಜ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಬಿಜೆಪಿಯ ಕಿರಣ್ ಕುಮಾರ್ ಮತ್ತು ಜೆಡಿಎಸ್ ಮುಖಂಡ ಎಚ್.ನಿಂಗಪ್ಪ ಇಬ್ಬರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಬಲಬಂದಂತೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಬಿಜೆಪಿ ಪಕ್ಷದಿಂದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಸಿಗಲಿದೆ ಎಂದು ಕಾದು ನೋಡುವ ತಂತ್ರಕ್ಕೆ ಮರೆಹೋಗಿದ್ದ ಮಾಜಿ ಶಾಸಕ ಕಿರಣ್ ಕುಮಾರ್ ಅವರು ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪುವ ಆತಂಕದಲ್ಲಿದ್ದರು. ಇನ್ನು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಹಾಲಿ ಸಚಿವರಾದ ಜೆಸಿ ಮಾಧುಸ್ವಾಮಿ ರವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲು ಮುಂದಾಗಿದ್ದಾರೆ ಎಂದು ತಾಲೂಕಿನ ಅತ್ಯಂತ ಚರ್ಚೆ ಶುರುವಾಗಿದೆ.
ಈ ಮೂವರು ಮಾಜಿ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು. ಈ ಮೂವರು ನಾಯಕರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿರಣ್ ಕುಮಾರ್ ಹಾಗೂ ನಾಗರಾಜ್ ಅವರಿಗೆ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಇನ್ನು ಇದೇ ಸಂದರ್ಭದಲ್ಲಿ ಹಾಲಿ ಕೊರಟಗೆರೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ, ಮಾಜಿ ಸಚಿವರಾದ ಟಿಬಿ ಜಯಚಂದ್ರ, ಮಾಜಿ ಶಾಸಕ ಕೆಎನ್ ರಾಜಣ್ಣ ಸೇರಿದಂತೆ ಜಿಲ್ಲೆಯ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.