ಮಾರುಕಟ್ಟೆಯಲ್ಲಿ ರೇಷ್ಮೆ ವಸ್ತುಗಳಿಗೆ ಹೆಚ್ಚು ಬೇಡಿಕೆ: ಡಾ.ಬಾಲಕೃಷ್ಣಪ್ಪ
ತುಮಕೂರು: ಮಹಿಳೆಯರು ರೇಷ್ಮೆಯಿಂದ ಹಲವಾರು ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಾ.ಬಾಲಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಕೋರ ಹೋಬಳಿಯ ಮೇಳೆಹಳ್ಳಿಯಲ್ಲಿ ಮಂಗಳವಾರ ಸಂಜೀವಿನಿ ಶ್ರೀ ಲಕ್ಷ್ಮೀ ಪುಡ್ ಪ್ರಾಡಕ್ಟ್ ಸದಸ್ಯರಿಗೆ ಆಯೋಜಿಸಿದ್ದ ಆಹಾರೋತ್ಪನ್ನ ಮತ್ತು ಕೌಶಲ್ಯ ಮಹಿಳಾ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರೇಷ್ಮೆಯಿಂದ ತಯಾರಾಗುತ್ತಿರುವ ಉತ್ಪನ್ನಗಳಿಂದ ಹಲವಾರು ರೀತಿಯ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲೆ ಮಾರಾಟ ಮಾಡಿ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಹಿಳಾ ಸಂಘ ಸಂಸ್ಥೆಗಳು ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ರೇಷ್ಮೆಯಿಂದ ತಯಾರಿಸಿದ ಮೊಮೆಂಟೊ.ಶಾಲ್,ಟೋಪಿ,ಬೊಕ್ಕೆ,ವಸ್ತ್ರಗಳು,ಗೃಹ ಬಳಕೆಯ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಸ್ವದೇಶಿಯವಾಗಿ ಹಾಗೂ ರೇಷ್ಮೆಯಿಂದ ಮಾಡಲಾಗಿರುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆಯಿಂದ ತಯಾರಾಗುತ್ತಿರುವ ವಸ್ತುಗಳ ಬೇಡಿಕೆಯನ್ನು ಗಮನಿಸಿದ ಸರಕಾರ ರೇಷ್ಮೆಯಿಂದ ಸಾಮಗ್ರಿಗಳನ್ನು ತಯಾರಿಸುವುದನ್ನು ಹೆಚ್ಚಿಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಇಲಾಖೆಯೂ ಕೂಡ ರೇಷ್ಮೆ ಬೆಳೆಯುವ ರೈತರಿಗೆ ಹಾಗೂ ರೇಷ್ಮೆಯಿಂದ ಸಿದ್ದ ವಸ್ತುಗಳನ್ನು ತಯಾರಿಸುವ ಕಾರ್ಮಿಕರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ ಬೆಳೆಗಳಿಂದ ಹಲವಾರು ರೀತಿಯ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲದೇ ಗ್ರಾಮೀಣ ಭಾಗದ ಮಹಿಳೆಯರು ಬದುಕು ಕಟ್ಟಿಕೊಳ್ಳಲು ರೇಷ್ಮೆಯಿಂದ ವಸ್ತುಗಳನ್ನು ತಯಾರಿಸಲು ಗುಡಿಕೈಗಾರಿಕೆಗಳನ್ನು ಆರಂಭಿಸುತ್ತಿರುವುದು ಸಂತಸ, ಇನ್ನಷ್ಟು ಮಹಿಳಾ ಸಂಘಗಳು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಸ್ತುಗಳನ್ನು ಸಿದ್ದಪಡಿಸಿ ಮಾರಾಟ ಮಾಡಿ ಆರ್ಥಿಕವಾಗಿ ಸದೃಡರಾಗುವಂತೆ ಕರೆ ನೀಡಿದರು.
ಎನ್.ಆರ್.ಎಂ.ಎಲ್ನ ಮೇಲ್ವಿಚಾರಕ ಕಾಂತರಾಜು, ಶ್ರೀಲಕ್ಷ್ಮೀ ಪುಡ್ಪ್ರಾಡೆಕ್ಟ್ನ ಅಧ್ಯಕ್ಷೆ ಹಾಗೂ ಉದ್ಯಮಿ ಚಂದ್ರಕಲಾ,ಸಂಪನ್ಮೂಲ ವ್ಯಕ್ತಿ ಅನ್ನಪೂರ್ಣಮ್ಮ, ಗ್ರಾಪಂ ಸದಸ್ಯ ಯಧುಕುಮಾರ್,ಭವ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.