ನೂತನ ಪಕ್ಷದ ಘೋಷಣೆ ಮೂಲಕ ರಾಜ್ಯ ರಾಜಕಾರಣಕ್ಕೆ ಜನಾರ್ದನ್ ರೆಡ್ಡಿ ಗ್ರಾಂಡ್ ಎಂಟ್ರಿ.
ಬೆಂಗಳೂರು-ಬಿಜೆಪಿಯೊಂದಿಗಿನ ಋಣ ಇಂದಿಗೆ ಮುಗಿಯಿತು. ಜನ ಸಾಮಾನ್ಯರ ಒತ್ತಡದಂತೆ ಮತ್ತೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಲು ತಾವು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸುತ್ತಿದ್ದೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ.
ರೆಡ್ಡಿ ತಮ್ಮ ನಿವಾಸ ಪಾರಿಜಾತದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಣ್ಣ ಬಸವಣ್ಣ ಅವರ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತ ಆಧರಿಸಿ ಯಾವುದೇ ಜಾತಿ, ಮತ, ಲಿಂಗ ತಾರತಮ್ಯ ಇಲ್ಲದಂತೆ ಅಭಿವೃದ್ಧಿ ಕೆಲಸ ಮಾಡಲು ಹೊಸ ಪಕ್ಷ ಸ್ಥಾಪಿಸಲಾಗುತ್ತಿದೆ.
ಇನ್ನೂ ಮುಂದೆ ಜಾತಿ, ಧರ್ಮ ರಾಜಕೀಯ ಮಾಡುವವರಿಗೂ ಉಳಿಗಾಲವಿಲ್ಲದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೆಲಸ ಮಾಡಲಿದೆ. ಇಡೀ ರಾಜ್ಯಾದ್ಯಂತ ಪ್ರತಿ ಮನೆ ಮನೆಗೆ ಪಕ್ಷ ತಲುಪಲಿದೆ ಎಂದು ಹೇಳಿದರು.
ಯಾವುದೇ ಹೊಸ ಕೆಲಸವಾದರೂ ನನಗೆ ಈವರೆಗೂ ಸೋಲಾಗಿಲ್ಲ, ಗೋಲಿ ಆಡುವಾಗಲೂ ನಾನು ಸೋಲು ಕಂಡಿಲ್ಲ. ಗುರಿಯಿಟ್ಟು ಹೊಡೆದರೆ ಗೋಲಿ ಆಟದಲ್ಲೂ ಗೆಲ್ಲುತ್ತೇವೆ. ಅದೇ ತರ ಹೊಸ ಪಕ್ಷದಲ್ಲಿ ನನಗೆ ಯಶಸ್ಸು ಖಂಡಿತ ಸಿಗಲಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಜಯ ಗಳಿಸಲಿದೆ. ಇದಕ್ಕೆ ಎಲ್ಲರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ನನ್ನ ನಡುವಿನ ಈ ಸಂಬಂಧ ಮುಗಿದು ಹೋಯಿತು. ವಾಜಪೇಯಿ, ಅಡ್ವಾಣಿ, ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಎಲ್ಲರನ್ನು ನೆನಪಿಸಿಕೊಂಡೇ ಪಕ್ಷ ತೊರೆಯುತ್ತಿದ್ದೇನೆ. ಯಡಿಯೂರಪ್ಪ, ಶ್ರೀರಾಮುಲು ಪರವಾಗಿ ನಾನು ಆಡಿದ ಒಳ್ಳೆಯ ಮಾತುಗಳ ಹಿಂದೆ ಅವರು ನನ್ನ ಪಕ್ಷಕ್ಕೆ ಬರಬೇಕು ಎಂಬ ಸ್ವಾರ್ಥ ಇಲ್ಲ. ಅವರ ಕುರಿತು ವಾಸ್ತವಾಂಶಗಳನ್ನು ಹಂಚಿಕೊಂಡಿದ್ದೇನೆ ಎಂದರು.
ಚುನಾವಣೆಯಲ್ಲಿ ನಾನು ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಅಲ್ಲಿ ಈಗಾಗಲೇ ಮನೆ ಮಾಡಿದ್ದೇನೆ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿದ್ದೇನೆ. ನಾನು ಯಾರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ. ಹೊಸ ಪಕ್ಷ ಸ್ಥಾಪನೆಗೆ ಬಿಜೆಪಿ ಕುಮ್ಮಕ್ಕು ಕಾರಣವಲ್ಲ ಎಂದು ಸ್ಪಷ್ಟಪಡಿಸಿದ ಅವರು. 10-15 ದಿನದಲ್ಲಿ ಪಕ್ಷದ ಲಾಂಭನ, ಕಚೇರಿ, ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.