ಸ್ಥಳೀಯ ಅಧಿಕಾರಿಗಳ ನಿರ್ಲಕ್ಷಕ್ಕೆ ಹಾಳಾದ ರಸ್ತೆ ಬಲಿಗಾಗಿ ಕಾಯುತ್ತಿರುವ ರಸ್ತೆಗೆ ಬೇಕಿದೆ ಕಾರ್ಯಕಲ್ಪ.
ತುಮಕೂರು : ತುಮಕೂರು ತಾಲ್ಲೂಕು, ಊರುಕೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸನ್ನಿಹದಲ್ಲೇ ಇರುವ ಭೋವಿ ಪಾಳ್ಯ ಮುಖ್ಯರಸ್ತೆಯ ಗುಂಡಿಗಳು ತಮ್ಮ ಬಲಿಗಾಗಿ ಬಾಯ್ತೆರೆದು ನಿಂತಿವೆ.
ಊರುಕೆರೆ ಗ್ರಾಮ ಪಂಚಾಯಿತಿ ವಿಭಾಗದ ರಸ್ತೆಗಳು ತುಂಬಾ ಅದ್ಭುತವಾಗಿದ್ದು ಪಾಪ ಜನ ಸಾಮಾನ್ಯರು ಬೈದಾಡಿಕೊಂಡು, ಹಿಡಿ ಶಾಪ ಹಾಕಿಕೊಂಡು ಓಡಾಡುವಂತಹ ಪರಿಸ್ಥಿತಿ ಬಂದಿರುತ್ತದೆ.
ಊರುಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಣದ ಕೊರತೆಯೋ, ಕೆಲಸ ಮಾಡಲು ಅಸಹಾಯಕವೋ ಅರಿಯದು, ಆದರೆ ರಸ್ತೆಗಳು ಮಾತ್ರ ಅತ್ಯಾದ್ಭುತವಾಗಿವೆ. ಏಕೆಂದರೆ ಈ ಒಂದು ರಸ್ತೆಯ ಉದಾಹರಣೆಯೇ ಸಾಕು.
ಭೋವಿ ಪಾಳ್ಯ ಮುಖ್ಯರಸ್ತೆಯು ಹಲವಾರು ಮುಖ್ಯ ಕೇಂದ್ರಗಳ ಸಂಪರ್ಕ ಸೇತುವಾಗಿದೆ, ಈ ರಸ್ತೆಯ ಮಾರ್ಗವಾಗಿ ಭೋವಿಪಾಳ್ಯದಲ್ಲಿರುವ ತುಮಕೂರು ಜಿಲ್ಲಾ ಬಂಧಿಖಾನೆಯನ್ನು ಸಂಪರ್ಕಿಸುವ ರಸ್ತೆಯಾಗಿರುತ್ತದೆ, ಆಹಾರ ಶೇಖರಣಾ ಕೇಂದ್ರದ ಸಂಪರ್ಕ ರಸ್ತೆಯಾಗಿದೆ, ಸ್ಪೂರ್ತಿ ಫುಡ್ಸ್ ಎಂಬ ಕಾರ್ಖಾನೆಗೆ ಹೋಗುವ ಸಂಪರ್ಕ ರಸ್ತೆಯಾಗಿದೆ, ಅಣ್ಣೇನಹಳ್ಳಿಯಲ್ಲಿರುವ ವಸತಿ ಸಂಕೀರ್ಣದ ಸಂಪರ್ಕ ರಸ್ತೆಯಾಗಿದೆ, ಈ ರಸ್ತೆಯ ಮಾರ್ಗವಾಗಿ ಅರಕೆರೆ ಹಾಗೂ ಯಲ್ಲಾಪುರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯಾಗಿದ್ದು, ಹಲವಾರು ತಿಂಗಳುಗಳಿಂದ ಈ ರಸ್ತೆ ಹದಗೆಟ್ಟಿದ್ದರೂ ಸಹ ಸ್ಥಳೀಯ ಜನಪ್ರತಿನಿಧಿಗಳು, ಈ ಬಗ್ಗೆ ಗಮನ ಹರಿಸದೇ ಇರುವುದರ ಪ್ರಯುಕ್ತ ಈ ರಸ್ತೆಯು ಬಲಿಗಾಗಿ ಬಾಯ್ತೆರೆದಿದೆ.
ಇನ್ನು ಸ್ಥಳೀಯ ಅಧಿಕಾರಿಗಳು ರಸ್ತೆ ಹಾಳಾಗಿರುವುದನ್ನ ಕಂಡರೂ ಸಹ ತಮಗೂ ಇದಕ್ಕೂ ಸಂಬಂಧವೇ ಇಲ್ಲವಂತೆ ವರ್ತಿಸುತ್ತಿರುವುದು ಸಹ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ರಸ್ತೆಯಲ್ಲಿ ಮಳೆ ಬಂದಾಗ ಓಡಾಡಲು, ವಾಹನ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಬಂದಿದೆ, ಇನ್ನು ಆಸ್ಪತ್ರೆಗೆ ತೆರಳುವಂತಹ ರೋಗಿಗಳಿಗೆ ತೀವ್ರ ತೊಂದರೆ ಉಂಟಾಗಿದ್ದು ಇನ್ಮುಂದೆಯಾದರೂ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ರಸ್ತೆಯನ್ನು ದುರಸ್ಥಿ ಕಾರ್ಯ ಮಾಡಬೇಕಾಗಿದೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.