“ಹೊಸ ಧರ್ಮಗಳ ಉದಯ”ಕ್ಕೆ ಕೊಕ್ ಸರಿಯಾದ ಕ್ರಮವಲ್ಲ ಎಂದ ಬರಗೂರು ರಾಮಚಂದ್ರಪ್ಪ…

“ಹೊಸ ಧರ್ಮಗಳ ಉದಯ”ಕ್ಕೆ ಕೊಕ್ ಸರಿಯಾದ ಕ್ರಮವಲ್ಲ ಎಂದ ಬರಗೂರು ರಾಮಚಂದ್ರಪ್ಪ…

ಬುದ್ಧ ಗುರುವಿಗೆ ಅವಮಾನ ಮಾಡಿದಂತಾಗಲಿಲ್ಲವೇ.

 

ಬೆಂಗಳೂರು: 6 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ “ಹೊಸ ಧರ್ಮಗಳ ಉದಯ” ಪಾಠವನ್ನು ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿರುವುದನ್ನು ಚಿಂತಕ ಹಾಗೂ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಖಂಡಿಸಿದ್ದಾರೆ.

 

6 ನೇ ತರಗತಿ ಸಮಾಜ ವಿಜ್ಞಾನ- ಭಾಗ 1 ರಲ್ಲಿನ ಪಾಠ-7 “ಹೊಸ ಧರ್ಮಗಳ ಉದಯ” ಇದರ ಪುಟ 82 ಮತ್ತು 83ರಲ್ಲಿದ್ದ ವಿಷಯಗಳನ್ನು 2020-21ನೇ ಶೈಕ್ಷಣಿಕ ಸಾಲಿಗೆ ಬೋಧನೆ-ಕಲಿಕೆ/ ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಬೇಕು. ಕೈಗೊಂಡ ಕ್ರಮಗಳನ್ನು ಫೆ. 28ರೊಳಗೆ ವರದಿ ಮಾಡಲು ಆದೇಶದಲ್ಲಿ ತಿಳಿಸಿದೆ.

 

ಈ ಎರಡು ಪುಟಗಳಲ್ಲಿ ಬುದ್ಧನ ಜೀವನ ಕುರಿತ ಮಾಹಿತಿ ಹಾಗೂ ಬೌದ್ಧಧರ್ಮ ಪರಿಚಯ ಇದೆ. ಬ್ರಾಹ್ಮಣರ ವಿರುದ್ಧದ ಅವಹೇಳನಕಾರಿ ಅಂಶಗಳನ್ನು ತೆಗೆಯುವ ನೆಪದಲ್ಲಿ ಬೌದ್ಧಧರ್ಮ ಮತ್ತು ಬುದ್ಧ ಗುರುವಿನ ವಿಷಯವನ್ನು ತೆಗೆದಿರುವುದು ಸರಿಯಲ್ಲ. ಈ ವಿಷಯವನ್ನು ಬೋಧಿಸಬಾರದು ಎಂಬ ತೀರ್ಮಾನವು ಬೌದ್ಧಧರ್ಮೀಯರಿಗೆ ನೋವುಂಟು ಮಾಡುವುದಿಲ್ಲವೇ, ಬುದ್ಧ ಗುರುವಿಗೆ ಅವಮಾನ ಮಾಡಿದಂತಾಗಲಿಲ್ಲವೇ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.

ಪಠ್ಯಪುಸ್ತಕಗಳಲ್ಲಿ ಯಾವುದಾದರೂ ಅಸತ್ಯ ಇದ್ದರೆ ತೆಗೆದುಹಾಕಲು ಅವಕಾಶವಿದೆ. ಅವಹೇಳನಕಾರಿ ಅಂಶಗಳು ಎಂದು ಹೇಳಿರುವ ವಿಷಯಗಳಲ್ಲಿ ಯಾವುದೇ ಅಸತ್ಯ ಅಥವಾ ತಪ್ಪು ಇಲ್ಲ. ಪಠ್ಯಕ್ರಮದಲ್ಲಿನ ಯಾವುದೇ ಅಂಶದ ಬಗ್ಗೆ ಆಕ್ಷೇಪವಿದ್ದರೆ ಸರಿಪಡಿಸುವ ಕೆಲಸವನ್ನು ಸರ್ಕಾರ ಏಕಪಕ್ಷೀಯವಾಗಿ ಮಾಡಬಾರದು. ವಿಷಯ ತಜ್ಞರ ಪರಿಶೀಲನೆಗೆ ಒಪ್ಪಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ

 

ಯಾವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ. ಅಧ್ಯಾಯದ ಪುಟ ಸಂಖ್ಯೆ 82 ಮತ್ತು 83ರಲ್ಲಿನ ವಿಷಯಾಂಶಗಳನ್ನು ಪರಿಗಣಿಸದಿರುವಂತೆ ಹೇಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!