ಬಾಳೆಕಾಯಿ ಕದ್ದ ಆರೋಪ ದಲಿತ ಯುವಕನ ಮೇಲೆ ಹಲ್ಲೆ ಆರೋಪ ಯುವಕನ ಸಾವು, ದೂರು ದಾಖಲು , ಆರೋಪಿಗಳ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ
ಮಧುಗಿರಿ: ತೋಟದಲ್ಲಿ ಬಾಳೆಕಾಯಿ ಕದ್ದ ಎಂಬ ಕಾರಣದಿಂದ ಯುವಕನನ್ನು ಥಳಿಸಿದ ತೋಟದ ಮಾಲೀಕರು, ನಂತರ ಠಾಣೆಗೆ ಕರೆದೊಯ್ದು ಪೊಲೀಸರಿಂದಲೂ ಥಳಿಸಿದ ಕಾರಣ ದೈಹಿಕ ನೋವಿನಿಂದ ಯುವಕ ಸಾವನ್ನಪ್ಪಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ತಾಲೂಕಿನ ಐಡಿಹಳ್ಳಿಯ ವಾಸಿ ಬಸ್ತಪ್ಪನ ಮಗ ಪುರುಷೋತ್ತಮ್ ಪ್ರಸಾದ್ (35) ಮೃತ ಯುವಕ. ಈತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತ ಸೆ.30 ರಂದು ಕೊಡಿಗೇನಹಳ್ಳಿಯ ಮೈದನಹಳ್ಳಿಯ ತೋಟದಲ್ಲಿ 2 ಬಾಳೆಕಾಯಿ ಗೊನೆ ಕದ್ದಿದ್ದ ಎಂದು ಆರೋಪಿಸಿ ತೋಟದ ಮಾಲೀಕರು ಸ್ಥಳದಲ್ಲೇ ಥಳಿಸಿ ನಂತರ ಕೊಡಿಗೇನಹಳ್ಳಿ ಠಾಣೆಗೆ ಕರೆತಂದು ಅಲ್ಲಿಯೂ ಥಳಿಸಿದ್ದರು. ಬೆಳಿಗ್ಗೆ 5 ಸಾವಿರ ದಂಡಹಾಕಿ ತೀರ್ಮಾನ ಮಾಡಿ ಬಿಟ್ಟಿದ್ದರು ಎಂದು ಮೃತ ಯುವಕನ ತಂದೆ ಬಸ್ತಪ್ಪ ತಿಳಿಸಿದ್ದಾರೆ. ನಂತರ ಕೆಲ ದಿನಗಳ ಕಾಲ ನೋವಿನ ಕಾರಣ ಮಗನ ವೃಷಣಗಳು ಊದಿಕೊಂಡಿದ್ದು, ಹಿಂಭಾಗ ಹಾಗೂ ಎದೆ ಭಾಗದಲ್ಲಿ ನೋವು ಹೆಚ್ಚಾಗಿತ್ತು. ಕೊನೆಗೆ ಆಸ್ಪತ್ರೆಗಳಿಗೆ ಅಲೆದಾಡಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನೋವು ತಾಳಲಾರದೆ ಎಲ್ಲವನ್ನು ಹೇಳಿದ್ದು ಸೋಮವಾರ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಐಡಿಹಳ್ಳಿಯ ಆಸ್ಪತ್ರೆ, ಮಧುಗಿರಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡದರೂ ಚೇತರಿಕೆ ಕಾಣಲಿಲ್ಲ. ಇದಕ್ಕೆ ತೋಟದ ಮಾಲೀಕರೇ ಕಾರಣ ಎಂದು ಬಸ್ತಪ್ಪ ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ದಲಿತ ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದು ಮೃತ ಯುವಕನ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿದ್ದಾರೆ. ಠಾಣೆಗೆ ಭೇಟಿ ನೀಡಿದ್ದ ಎಸ್ಪಿ ರಾಹುಲ್ ಕುಮಾರ್ ತಡರಾತ್ರಿ 10 ರವರೆಗೂ . ಅಲ್ಲೇ ಇದ್ದು ನ್ಯಾಯದ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಅಂಜಿಕೆಯಿಲ್ಲದೆ ದೂರು ನೀಡಿ ಎಂದರು. ನಂತರ ತೋಟದ ಮಾಲೀಕ ಬಾಲಾಜಿ ರೆಡ್ಡಿ ಹಾಗೂ ಸಹಚರರ ಮೇಲೆ ದೂರು ದಾಖಲು ಮಾಡಲಾಯಿತು. ಸ್ಥಳದಲ್ಲಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಹಾಗೂ ಇತರೆ ಅಧಿಕಾರಿಗಳು, ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ಕುಟುಂಬಸ್ಥರು ಇದ್ದರು.