ಶ್ರೀಲಂಕಾದಲ್ಲಿ 2 ದಿನದಲ್ಲಿ ಸರಕಾರ ರಚನೆಯಾಗದಿದ್ದರೆ ಅರ್ಥವ್ಯವಸ್ಥೆ ಕುಸಿತ: ಸೆಂಟ್ರಲ್ ಬ್ಯಾಂಕ್ ಎಚ್ಚರಿಕೆ

ಶ್ರೀಲಂಕಾದಲ್ಲಿ 2 ದಿನದಲ್ಲಿ ಸರಕಾರ ರಚನೆಯಾಗದಿದ್ದರೆ ಅರ್ಥವ್ಯವಸ್ಥೆ ಕುಸಿತ: ಸೆಂಟ್ರಲ್ ಬ್ಯಾಂಕ್ ಎಚ್ಚರಿಕೆ

 

 

ಕೊಲಂಬೊ, ಮೇ 11: ರಾಜಕೀಯ ಸ್ಥಿರತೆಗಾಗಿ ದೇಶದಲ್ಲಿ 2 ದಿನದೊಳಗೆ ನೂತನ ಸರಕಾರ ರಚನೆಯಾಗದಿದ್ದರೆ ದೇಶದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳದ ರೀತಿಯಲ್ಲಿ ಕುಸಿಯಲಿದೆ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ನಂದಲಾಲ್ ವೀರಸಿಂಘೆ ಬುಧವಾರ ಹೇಳಿದ್ದಾರೆ.

 

ದೇಶದಲ್ಲಿ ತಲೆದೋರಿರುವ ಗುಂಪು ಹಿಂಸಾಚಾರ ಪ್ರಕರಣ ಅರ್ಥವ್ಯವಸ್ಥೆಗೆ ಚೇತರಿಕೆ ನೀಡಲು ಬ್ಯಾಂಕ್ ರೂಪಿಸಿದ ಯೋಜನೆಗಳನ್ನು ಹಳಿತಪ್ಪಿಸಿದೆ, ಪ್ರಧಾನಿಯ ರಾಜೀನಾಮೆ ಮತ್ತು ಬದಲಿ ವ್ಯವಸ್ಥೆ ಮಾಡದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.ಆರ್ಥಿಕ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಲು ರಾಜಕೀಯ ಸ್ಥಿರತೆ ಅಗತ್ಯವಿದೆ. ಸೆಂಟ್ರಲ್ ಬ್ಯಾಂಕ್ನ ಗವರ್ನರ್ ಆಗಿ ಒಂದು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದಾಗ ದೇಶದ ಅರ್ಥವ್ಯವಸ್ಥೆ ತೀವ್ರಗತಿಯಲ್ಲಿ ಕುಸಿಯುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲು ಸಾಧ್ಯವಿದೆ ಎಂದು ಭಾವಿಸಿದ್ದೆವು. ಆದರೆ ಸೋಮವಾರದ ಘಟನೆ ಬ್ರೇಕ್ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂದವರು ಹೇಳಿದ್ದಾರೆ. ಒಂದು ಅಥವಾ 2 ವಾರದೊಳಗೆ ಅರ್ಥವ್ಯವಸ್ಥೆ ಸಂಪೂರ್ಣ ಕುಸಿಯಲಿದೆ.

 

ಆ ಹಂತದಲ್ಲಿ ಶ್ರೀಲಂಕಾವನ್ನೂ ಯಾರೊಬ್ಬರೂ ರಕ್ಷಿಸಲು ಸಾಧ್ಯವಾಗದು. ಸರಕಾರ ರಚನೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಾನು ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ವೀರಸಿಂಘೆ ಹೇಳಿದ್ದಾರೆ. ಕಳೆದ ತಿಂಗಳು ಸೆಂಟ್ರಲ್ ಬ್ಯಾಂಕ್ಬ ಗವರ್ನರ್ ಆಗಿ ನೇಮಕಗೊಂಡ ತಕ್ಷಣ ಅವರು ಬಡ್ಡಿ ದರವನ್ನು ದ್ವಿಗುಣಗೊಳಿಸಿದ್ದರು ಮತ್ತು ವಾಣಿಜ್ಯ ಬ್ಯಾಂಕ್ಗಳು ವಿದೇಶ ವಿನಿಮಯ ದಾಸ್ತಾನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿದ್ದರು. ರಾಜಕೀಯ ಸ್ಥಿರತೆ ಸಾಧ್ಯವಾಗದಿದ್ದರೆ ಈಗ ಅಲ್ಪಪ್ರಮಾಣದಲ್ಲಿ ಇರುವ ಪೆಟ್ರೋಲ್, ಡೀಸೆಲ್ ದಾಸ್ತಾನು ಬರಿದಾಗಲಿದೆ. ಆಗ ಜನತೆ ಬೀದಿಗಿಳಿದು ಶಾಂತರೀತಿಯಲ್ಲಿ ಅಥವಾ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದವರು ಹೇಳಿದ್ದಾರೆ.ಜನಾಂಗೀಯ ಅಸಾಮರಸ್ಯ ಮೂಡಿಸುವ ಪ್ರಯತ್ನ: ಶ್ರೀಲಂಕಾ ಅಧ್ಯಕ್ಷರ ಎಚ್ಚರಿಕೆ

 

ದೇಶದಲ್ಲಿ ಜನಾಂಗೀಯ ಮತ್ತು ಧಾರ್ಮಿಕ ಅಸಾಮರಸ್ಯದ ಪರಿಸ್ಥಿತಿ ಹುಟ್ಟುಹಾಕಲು ನಡೆಯುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸುವಂತೆ ಜನತೆಗೆ ಕರೆ ನೀಡಿರುವ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ, ದೇಶದಲ್ಲಿ ಜಾರಿಗೊಳಿಸಿರುವ ಕರ್ಫ್ಯೂವನ್ನು ಮತ್ತೆ 24 ಗಂಟೆ ವಿಸ್ತರಿಸಿರುವುದಾಗಿ ಘೋಷಿಸಿದ್ದಾರೆ. ದೇಶಕ್ಕೆ ಎದುರಾಗಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸವಾಲನ್ನು ಮೀರಿ ನಿಲ್ಲಲು ಎಲ್ಲಾ ಶ್ರೀಲಂಕನ್ನರೂ ಒಗ್ಗೂಡುವ ಸಮಯ ಇದಾಗಿದೆ . ಸಂಯಮ, ಸಹಬಾಳ್ವೆ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ದೇಶದಾದ್ಯಂತ ಸೋಮವಾರ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದ ಹಿನ್ನೆಲೆಯಲ್ಲಿ ದೇಶದಾದ್ಯಂತ ಬುಧವಾರದವರೆಗೆ (ಮೇ 11) ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇದೀಗ ಇದನ್ನು ಮತ್ತೆ 24 ಗಂಟೆ ವಿಸ್ತರಿಸಲಾಗಿದೆ ಎಂದು ಅಧ್ಯಕ್ಷರ ಹೇಳಿಕೆ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!