ಮತ್ತೋರ್ವ ದಲಿತ ಯುವಕನ ಸಾವಿಗೆ ಕಾರಣವಾಯಿತಾ ಜಾತಿ ವೈಷಮ್ಯ…..?
ತುಮಕೂರು_ತುಮಕೂರು ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ದಿನಕಳೆದಂತೆ ಹೆಚ್ಚಾಗುತ್ತಿದೆಯೇ..? ಎನ್ನುವ ಅನುಮಾನ ಮೂಡುವಂತಾಗಿದೆ.
ಇತ್ತೀಚೆಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಯಲ್ಲಿ ನಡೆದ ದಲಿತ ಯುವಕರ ಹತ್ಯೆ ಪ್ರಕರಣ ಹಾಗೂ ತುರುವೇಕೆರೆ ತಾಲೂಕಿನ ಗುಂಡಿಕಾವಲ್ ನ ಈಶ್ವರಪ್ಪ ಎನ್ನುವ ದಲಿತರ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ ಹಚ್ಚಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದಲಿತ ಯುವಕನ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಇನ್ನೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ. ಹಲ್ಲೆ,ದೌರ್ಜನ್ಯ ,ಹತ್ಯೆ ಸಂಬಂಧ ದಲಿತರು ವರ್ಗದವರು ಇಡೀ ಸರ್ಕಾರಿ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಸ್ಥಿತಿ ನಿರ್ಮಾಣ ಆಗಿದೆ .ಕಾರಣ ತುಮಕೂರು ತಾಲ್ಲೂಕು ಕೊರಾ ಹೋಬಳಿಯ ಜಕ್ಕೆನಹಳ್ಳಿ ಗ್ರಾಮದ ದಲಿತ ಯುವಕನೊಬ್ಬನ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತದೆ.
ಕಾರಣ ಮುತ್ತುರಾಜು ಎನ್ನುವ 25 ವರ್ಷದ ಯುವಕ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ್ದು ಏಪ್ರಿಲ್ 28ರಂದು ಅದೇ ಗ್ರಾಮದ ಯುವಕನೊಂದಿಗೆ ಮನೆಯಿಂದ ಆಚೆ ಹೋದವನು ಕೊನೆಗೆ ಏಪ್ರಿಲ್ 29 ರಂದು ಎತ್ತಿನಹೊಳೆ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದನು. ಘಟನೆಗೆ ಸಂಬಂಧಿಸಿದಂತೆ ಮೃತ ಯುವಕ ಮುತ್ತುರಾಜು ಪೋಷಕರು ಸಾವಿಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇನ್ನೂ ಮೃತ ಯುವಕನ ಪೋಷಕರು ನೀಡಿದ ದೂರನ್ನು ಪೊಲೀಸರು ತಿರುಚಿ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ದೂರನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೃತ ಯುವಕ ಮುತ್ತುರಾಜು ಪೋಷಕರು ಪೊಲೀಸ್ ಠಾಣೆಯ ಸಿಬ್ಬಂದಿ ಗಳ ಮೇಲೆ ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುತ್ತುರಾಜು ತಂದೆ ಮುತ್ತು ರಾಯಪ್ಪ ಪೊಲೀಸ್ ಠಾಣೆಯಲ್ಲಿ ತನ್ನ ಮಗನ ಸಾವು ಅನುಮಾನವನ್ನು ಮೂಡಿಸುತ್ತಿದೆ ಇದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳುವಂತೆ ತುಮಕೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ. ಇನ್ನೂ ದೂರು ನೀಡಿದ ಸಂದರ್ಭದಲ್ಲಿ ದೂರು ಪಡೆದುಕೊಂಡ ಪೊಲೀಸರು ತನಿಖೆ ಮಾಡದೆ, ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸದೆ ನಾವು ಕೊಟ್ಟದೂರನ್ನು ತಿರುಚಿ ದೂರು ದಾಖಲಿಸಿಕೊಂಡಿದ್ದು ಇದುವರೆಗೂ ಮೃತ ಯುವಕನ ಸಾವಿಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಹಾಗೂ ತನಿಖೆ ಮಾಡದೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಪೊಲೀಸ್ ಠಾಣೆಯ ಸಿಬ್ಬಂದಿ ಗಳ ಮೇಲೆ ಗಂಭೀರ ಆರೋಪ ಮಾಡಿದ್ದು.
ತನಿಖೆ ನಡೆಸದ ಹಾಗೂ ದೂರನ್ನ ತಿರುಚಿದ ಸಂಬಂಧ ಮೃತ ಯುವಕನ ಪೋಷಕರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ,ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಎಸ್ಸಿಎಸ್ಟಿ ಸೆಲ್ ಗೆ ಮೃತ ಯುವಕನ ಪೋಷಕರು ದೂರು ನೀಡಿದ್ದು ಎಲ್ಲಾ ಘಟನೆಗಳನ್ನು ನೋಡಿದರೆ ಸ್ಥಳೀಯ ಪೊಲೀಸರ ಮೇಲೆ ಅನುಮಾನ ಮೂಡಿಸುತ್ತಿದೆ ಎಂದರೆ ತಪ್ಪಾಗಲಾರದು.
ಇನ್ನು ಮೃತ ಯುವಕ ಮುತ್ತುರಾಜನ ಅಕ್ಕ ಮೇಲ್ಜಾತಿಯ ಯುವಕನನ್ನ ಮದುವೆಯಾದ ಸಂಬಂಧ ಜಾತಿ ವೈಷಮ್ಯಕ್ಕೆ ಯುವಕ ಮುತ್ತುರಾಜು ಬಲಿಯಾದನಾ….? ಎನ್ನುವ ಅನುಮಾನವನ್ನು ಸ್ವತಃ ಮೃತ ಯುವಕನ ಪೋಷಕರು ವ್ಯಕ್ತಪಡಿಸಿದ್ದಾರೆ
ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕಾದ ಪೊಲೀಸರು ತಾನು ನೀಡಿದ ದೂರನ್ನೇ ತಿರುಚಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿಹಾಕುವ ದೊಡ್ಡ ಹುನ್ನಾರವನ್ನು ಪೊಲೀಸ್ ಠಾಣ ಅಧಿಕಾರಿಗಳು ಮಾಡುತ್ತಿದ್ದಾರೆ ಅದ ಕಾರಣ ಠಾಣಾ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೃತ ಯುವಕನ ಪೋಷಕರು ದೂರನ್ನು ಸಲ್ಲಿಸಿದ್ದಾರೆ.
ಘಟನೆಯ ಸಂಬಂಧ ಪ್ರತಿಕ್ರಿಯಿಸಿರುವ ಮೃತನ ತಾಯಿ ಮಹಾಲಕ್ಷ್ಮಮ್ಮ ಮಾತನಾಡಿದ್ದು ನನ್ನ ಮಗನ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ ಈ ಮೂಲಕ ತಾವು ನೀಡಿದ ದೂರಿಗೆ ಎಫ್ಐಆರ್ ಪ್ರತಿಯನ್ನು ಸಹ ನೀಡದೆ ನಿರ್ಲಕ್ಷ್ಯವಹಿಸಿದ್ದಾರೆ ಹಾಗಾಗಿ ತನ್ನ ಮಗನ ಸಾವಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಿ ನನ್ನ ಮಗನ ಸಾವಿಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಮೃತ ಯುವಕನ ತಾಯಿ ಮಹಾಲಕ್ಷ್ಮಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಇನ್ನಾದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಕೈಗೊಳ್ಳುವರೇ ಎಂದು ಕಾದುನೋಡಬೇಕಾಗಿದೆ.
ವರದಿ_ಮಾರುತಿ ಪ್ರಸಾದ್ ತುಮಕೂರು