ದಿಢೀರ್ ಬೀಸಿದ ಬಿರುಸಿನ ಗಾಳಿ, ಶಾಮಿಯಾನ ಕುಸಿತ ಹಲವರಿಗೆ ಗಾಯ, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ತುಮಕೂರು ನಗರದ ಟಿ.ಪಿ.ಕೈಲಾಸಂ ರಸ್ತೆಯ ಬಳಿ ಇರುವ ಗಾರೆ ನರಸಯ್ಯನ ಕಟ್ಟೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಅದನ್ನು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಸಮಾರಂಭ ದಲ್ಲಿ ಘಟನೆ ನಡೆದಿದ್ದು ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಮಾರಂಭ ದಲ್ಲಿ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಪುತ್ರಿ, ತುಮಕೂರು ಮಹಾನಗರ ಪಾಲಿಕೆಯ ಮೇಯರ್, ಕಾರ್ಪೊರೇಟರ್ ವಿಷ್ಣುವರ್ಧನ್ ಸೇರಿದಂತೆ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಸ್ವಸಹಾಯ ಸಂಘಗಳ ನೂರಾರು ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ಈ ಭಾಗದ ಅಂದರೆ 30 ನೇ ವಾರ್ಡ್ ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಎದ್ದಿತು.
ಗಾಳಿಯ ರಭಸಕ್ಕೆ ಈ ಕಟ್ಟೆಯ ಒಳಭಾಗದಲ್ಲಿ ಹಾಕಿದ್ದ ಶಾಮಿಯಾನ ಬುಡಸಮೇತ ಕಿತ್ತು ಹೋಯಿತು. ವೇದಿಕೆ ಹಾಗೂ ಜನರ ಮೇಲೆ ಶಾಮಿಯಾನ ಉರುಳಿಬಿತ್ತು. ಶಾಮಿಯಾನದ ಕಬ್ಬಿಣದ ಕಂಬಿ ಬಿದ್ದು ಕಾರ್ಪೊರೇಟರ್ ವಿಷ್ಣುವರ್ಧನ್ ರವರು ಗಾಯಗೊಂಡರು. ಒಡನೆಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇತರ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು. ವೇದಿಕೆ ಪಕ್ಕ ನಿಲುಗಡೆಗೊಂಡಿದ್ದ ಕೆಲವು ಕಾರುಗಳ ಮೇಲೆ ಶಾಮಿಯಾನದ ಕಬ್ಬಿಣದ ಕಂಬಿಗಳು ಬಿದ್ದು ಕಾರುಗಳು ಜಖಂಗೊಂಡವು. ಅದೃಷ್ಟವಶಾತ್ ವೇದಿಕೆಯಲ್ಲಿದ್ದ ಗಣ್ಯರುಗಳು ಯಾವುದೇ ಅಪಾಯವಿಲ್ಲದೆ ಪಾರಾದರು. ಗಾಬರಿಯಿಂದ ಜನರು ದಿಕ್ಕಾಪಾಲಾಗಿ ಓಡಿದರು.
ಈ ಸಮಾರಂಭಕ್ಕೆಂದು ಆಗ ತಾನೇ ಹೊರಗಡೆ ನನ್ನ ಬೈಕ್ ನಿಲ್ಲಿಸಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ನನ್ನ ಕಣ್ಮುಂದೆಯೇ ಕಣ್ಣುಮುಚ್ಚಿ ತೆಗೆಯುವಷ್ಟರಲ್ಲಿ ಈ ಅನಿರೀಕ್ಷಿತ ಘಟನೆ ನಡೆದುಹೋಯಿತು. ನಾನೂ ಕೆಲ ಕ್ಷಣ ದಿಗ್ಮೂಢನಾದೆ ಎಂದು ಸ್ಥಳದಲ್ಲಿದ್ದ ಆರ್.ವಿಶ್ವನಾಥನ್ ಎಂಬುವವರು ತಿಸಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್