ಮಾಚನಹಳ್ಳಿ ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಾಲಯ ಉದ್ಘಾಟನೆ: ಶಾಸಕ ಡಿ.ಸಿ.ಗೌರಿಶಂಕರ್ ಭಾಗಿ
ತುಮಕೂರು ಗ್ರಾಮಾಂತರ: ತುಮಕೂರು ಗ್ರಾಮಾಂತರ ತಾಲ್ಲೋಕಿನ ಕೆಸರುಮಡು ಗ್ರಾ.ಪಂ. ವ್ಯಾಪ್ತಿಯ ಮಾಚನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ತಿರುಮಲ ರಂಗನಾಥ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲ್ಲೋಕಿನ ಊರ್ಡಿಗೆರೆ ಹೋಬಳಿ ಕೆಸರುಮಡು ಗ್ರಾ.ಪಂ.ವ್ಯಾಪ್ತಿಯ ಮಾಚನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ರಂಗನಾಥ ಸ್ವಾಮಿಯ ನೂತನ ದೇವಾಲಯ ಕಟ್ಟಡ ನಿರ್ಮಾಣಗೊಂಡಿದ್ದು ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕರು ದೇವಾಲಯದ ಅಭಿವೃದ್ಧಿಗೆ ವೈಯಕ್ತಿಕ ಮೂರು ಲಕ್ಷದ ಐವತ್ತು ಸಾವಿರ ರೂಗಳನ್ನು ದೇಣಿಗೆ ನೀಡಿದರು.
ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಭಾಗಿಯಾದ ಶಾಸಕರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಗ್ರಾಮವಾರು ಯೋಜನೆಗಳ ಕ್ರಿಯಾಯೋಜನೆ ತಯಾರಿಸಿ, ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಮಾಚನಹಳ್ಳಿ ಗ್ರಾಮಕ್ಕೆ ಸುಮಾರು 20ಲಕ್ಷರೂ ವ್ಯಚ್ಛದಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿ ಮತ್ತು 12ಲಕ್ಷ ರೂ ವ್ಯಚ್ಛದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಲಾಗಿದೆ ಎಂದು ತಿಳಿಸಿ ದೇವಾಲಯ ಅಭಿವೃದ್ಧಿಗೆ ಸರ್ಕಾರದ ವತಿಯಿಂದ 10ಲಕ್ಷ ರೂಗಳನ್ನು ಮಂಜೂರು ಮಾಡಿಸಿ ಕೊಡುವುದಾಗಿ ತಿಳಿಸಿ ತಮ್ಮ ವೈಯಕ್ತಿಕವಾಗಿ 3.5ಲಕ್ಷ ರೂಗಳನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಗ್ರಾ.ಪಂ. ಸದಸ್ಯರು ಮತ್ತು ಮಾಚನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.