ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ: ಸಿದ್ದರಾಮಯ್ಯ
ಮೈಸೂರು: ಲೋಕಭೆಯಲ್ಲಿ ಬರೀ ಭಾಷಣ ಹೊಡೆಯುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸವಾಗಿದ್ದು, ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ದಿವಾಳಿ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಭಾಷಣ ಬಿಗಿಯುವುದರಲ್ಲಿ ಬಹಳ ನಿಸ್ಸೀಮರು. ಆದರೆ ಅಭಿವೃದ್ಧಿ ಮಾತ್ರ ಶೂನ್ಯ, ಅವರ ಆಡಳಿತಾವಧಿಯಲ್ಲಿ 135 ಲಕ್ಷದ 87 ಸಾವಿರ ಕೋಟಿ ರೂ. ಸಾಲ ಮಾಡಲಾಗಿದೆ. ಮುಂದಿನ ವರ್ಷಕ್ಕೆ 11 ಲಕ್ಷದ 59 ಸಾವಿರ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದಾರೆ. ಈಗಾಗಾಲೇ ವರ್ಷಕ್ಕೆ 9 ಲಕ್ಷ ಕೋಟಿ ರೂ. ಬಡ್ಡಿ ಕಟ್ಟುತ್ತಿದ್ದಾರೆ. ಆದರೆ ಭಾಷಣದಲ್ಲಿ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ, ಅಚ್ಚೆ ದಿನ್ ಆಯೇಗ’ ಎಂದು ಬುರುಡೆ ಹೊಡೆಯುತ್ತಾರೆ. ಇದು ಇವರ ಅಚ್ಚೇ ದಿನ್ ಎಂದು ಹರಿಹಾಯ್ದರು.
ರಾಜ್ಯಕ್ಕೆ ಬರಬೇಕಾಗಿರುವ ಹಣವನ್ನು ನೀಡಿಲ್ಲ, ಇದನ್ನು ಕೇಳುವ ಧೈರ್ಯ ಯಡಿಯೂರಪ್ಪ ಸಹಿತ ರಾಜ್ಯದ ಸಂಸದರಿಗಿಲ್ಲ. ಜಿಎಸ್ ಟಿಯಲ್ಲಿ 20 ಸಾವಿರ ಕೋಟಿ ರೂ. ರಾಜ್ಯಕ್ಕೆ ಬರುತ್ತಿತ್ತು. ಅದು ಜೂನ್ 2022ಕ್ಕೆ ಅಂತ್ಯಗೊಳ್ಳಲಿದೆ. ಮತ್ತೆ ಇನ್ನು ಐದು ವರ್ಷಕ್ಕೆ ಹೆಚ್ಚಿಸುವಂತೆ ಕೇಳುವ ಧೈರ್ಯ ಯಾರಿಗೂ ಇಲ್ಲ. ಇದನ್ನು ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಲು ನಮ್ಮ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಪುಸ್ಕೃತ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರಕಾರ ಈ ಹಿಂದೆ 75%, 80% ಹಣ ನೀಡುತ್ತಿತ್ತು, ಆದರೆ ಈಗ 50% ಮಾತ್ರ ನೀಡುತ್ತಿದೆ. ರಾಜ್ಯ ಸರಕಾರ 50% ನೀಡಬೇಕು ಇದರಿಂದ ರಾಜ್ಯ ಸರಕಾರಕ್ಕೆ ಅನ್ಯಾಯವಾಗಲಿದೆ. ಇಷ್ಟೆಲ್ಲಾ ಅನಾನೂಕೂಲಗಳಿದ್ದರು ರಾಜ್ಯ ಸಂಸದರು ಮೋದಿ ಬಳಿ ಮಾತನಾಡಲು ಹೆದರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದ ಬಜೆಟ್ ಮೇಲೆ ಒಳ್ಳೆಯ ನಿರೀಕ್ಷೆ ಇಡಲು ಸಾಧ್ಯವಿಲ್ಲ, ಯಕೆಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲಿನಿಂದ ಬರೀ ಸುಳ್ಳುಗಳನ್ನೆ ಹೇಳುವುದಾಗಿದೆ. ಇವರು ಅಧಿಕಾರಕ್ಕೆ ಬಂದಾಗಿನಿಂದ ಒಂದೆ ಒಂದು ಮನೆ ನೀಡಲು ಆಗಿಲ್ಲ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಅಭಿವೃದ್ದಿ ಕಡೆಗೆ ಭರವಸೆಯ ಹೆಜ್ಜೆ ಎಂಬ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸ್ವಾತಂತ್ರ್ಯ ಬಂದಾಗಿನಿಂದ ನಾನು ಮುಖ್ಯಮಂತ್ರಿ ಆಗಿರೋ ವರೆಗೂ ರಾಜ್ಯದ ಸಾಲ 2 ಲಕ್ಷ 15 ಸಾವಿರ ಕೋಟಿ ರೂ. ಇತ್ತು. ಬಿಜೆಪಿ ಸರಕಾರ ಬಂದ ಮೇಲೆ ಇದು 4 ಲಕ್ಷದ 57 ಸಾವಿರ ಕೋಟಿ ರೂ. ಆಗಿದೆ. ಕೇವಲ ಮೂರು ವರ್ಷದಲ್ಲಿ ಬಿಜೆಪಿ ಸರಕಾರ 2 ಲಕ್ಷ 37 ಸಾವಿರ ಕೋಟಿ ರೂ. ಸಾಲ ಮಾಡಿದೆ ಎಂದು ಅಂಕಿಅಂಶಗಳ ಸಮೆತ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.