ಬಿಜೆಪಿ ಕಚೇರಿಯಲ್ಲೇ ಬಡಿದಾಡಿಕೊಂಡು ಕಾರ್ಯಕರ್ತರು: ಮಾಜಿ ಶಾಸಕ ಸುರೇಶ್ ಗೌಡರ ಬೆಂಬಲಿಗನ ವಿರುದ್ಧ ದೂರು.
ತುಮಕೂರು: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತನ ಮೇಲೆ ಮಾಜಿ ಜಿಲ್ಲಾಧ್ಯಕ್ಷ ಬಿ.ಸುರೇಶ್ಗೌಡರ ಬೆಂಬಲಿಗನೊಬ್ಬ ತೀವ್ರ ಹಲ್ಲೆ ನಡೆಸಿರುವ ಪ್ರಕರಣ ಹೊಸ ಬಡಾವಣೆ ಠಾಣೆ ಮೆಟ್ಟಿಲೇರಿದೆ.
ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದ ಸಂದರ್ಭದಲ್ಲಿಯೇ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ.
ಕ್ಯಾತಸಂದ್ರದ ಬಿಜೆಪಿ ಕಾರ್ಯಕರ್ತ ಕಾಂತರಾಜು, ಸಾಮಾಜಿಕ ಜಾಲತಾಣದ ಪ್ರಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಭಾಗದ ಸಂಚಾಲಕ ವಿನಯ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭೇಟಿಯಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ಗೌಡ ಅವರ ಹೆಸರನ್ನು ಸಾಮಾಜಿಕ ಜಾಲತಾಣದ ಪ್ರಚಾರದಲ್ಲಿ ಬಳಸಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಬಿಜೆಪಿ ಯುವ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿಯೇ ಬಡಿದಾಡಿಕೊಂಡು ಠಾಣೆಯಲ್ಲಿ ದೂರು ದಾಖಲಿಸಿರುವುದು ಪಕ್ಷದ ಮುಖಂಡರ ನಡುವೆಯೇ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿದೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಬಡಿದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಬಿಜೆಪಿ ಕಚೇರಿಯಲ್ಲಿ ಎಲ್ಲವೂ ಸರಿ ಇಲ್ಲ ಬಿಜೆಪಿ ಮನೆಯಲ್ಲಿ ಬಣಗಳ ರಾಜಕೀಯ ಗರಿಗೆದರಿ ಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆ ಮಾಡಿದೆ.
ವರದಿ _ಮಾರುತಿ ಪ್ರಸಾದ್ ತುಮಕೂರು