ಭಿಕ್ಷೆ ಬೇಡಿ ಉಳಿತಾಯ ಮಾಡಿದ 1 ಲಕ್ಷ ರೂ.ಗಳನ್ನು ದೇಗುಲಕ್ಕೆ ಅರ್ಪಿಸಿದ 80 ವರ್ಷದ ವೃದ್ಧೆ
ಬ್ರಹ್ಮಾವರ: ಪ್ರತಿನಿತ್ಯ ಭಿಕ್ಷೆ ಬೇಡಿ ಅದರಿಂದಲೇ ಜೀವನ ಸಾಗಿಸುತ್ತಿರುವ 80 ವರ್ಷದ ವೃದ್ಧೆ ಅಶ್ವತ್ಥಮ್ಮ ಎಂಬವರು ತಾವು ಉಳಿಕೆ ಮಾಡಿರುವ ಒಂದು ಲಕ್ಷ ರೂ. ಗಳನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲಕ್ಕೆ ಸಮರ್ಪಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಈ ಹಣವನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನದಾನ ಸೇವೆಯನ್ನೊದಗಿಸಲು ಬಳಕೆ ಮಾಡುವಂತೆಯೂ ಇವರ ದೇಗುಲದ ಆಡಳಿತ ಮಂಡಳಿಯ ಬಳಿ ಮನವಿ ಮಾಡಿದ್ದಾರೆ. ಹಾಗೆಯೇ, ಜಗತ್ತಿಗೆ ಅಂಟಿರುವ ಕೊರೋನಾ ಮಹಾಮಾರಿ ಆದಷ್ಟು ಬೇಗ ನಿರ್ಮೂಲನೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇವರಿಗೆ ಪ್ರಸಾದವನ್ನು ನೀಡಿ ಆಡಳಿತ ಮಂಡಳಿ ಗೌರವ ಸಮರ್ಪಿಸಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆಯಾಗಿರುವ ಇವರು ಕಳೆದ 30 ವರ್ಷಗಳಿಂದ ಭಿಕ್ಷಾಟನೆಯ ಮೂಲಕ ಜೀವನ ನಡೆಸುತ್ತಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ ಅಶ್ವತ್ಥಮ್ಮ ತಮ್ಮ ಪತಿ ಮತ್ತು ಪುತ್ರನ ಮರಣದ ಬಳಿಕ ಕುಂದಾಪುರಕ್ಕೆ ಬಂದು, ಇಲ್ಲಿ ನೆಲೆಸಿದ್ದಾರೆ. ಈ ಹಿಂದೆ ಪೊಳಲಿ ರಾಜರಾಜೇಶ್ವರಿ ದೇಗುಲಕ್ಕೂ ದೇಣಿಗೆ ಸಮರ್ಪಿಸಿದ್ದಾರೆ. ಪ್ರತಿ ವರ್ಷವೂ ಶಬರಿಮಲೆಗೆ ಹೋಗುವುದನ್ನು ಸಹಾ ರೂಢಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಶ್ವತ್ಥಮ್ಮ, ʼತಾನು ಪ್ರತಿನಿತ್ಯ ದೇವರಿಗಾಗಿ ಜನರ ಬಳಿ ದೇವರಿಗಾಗಿಯೂ ಹಣ ಸಂಗ್ರಹ ಮಾಡುತ್ತೇನೆ. ಭಿಕ್ಷೆ ಬೇಡಿದ ಹಣವನ್ನು ಬ್ಯಾಂಕ್, ಪಿಗ್ಮಿಗಳಲ್ಲಿ ಉಳಿತಾಯ ಮಾಡಿ ಅದು ರೂ.1 ಲಕ್ಷವಾಗುವಾಗ ಅದನ್ನು ದೇಗುಲಗಳಿಗೆ ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಕಾರ್ಯದಲ್ಲಿ ತನಗೆ ತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.