ರಾಜ್ಯದಲ್ಲಿ ಮತಾಂತರ ತಡೆ ಕಾರ್ಯಪಡೆ ಶೀಘ್ರ : ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಮತಾಂತರ ತಡೆ ಮಸೂದೆ ಕಾನೂನು ಆಗಿ ಪರಿವರ್ತನೆಯಾದ ತಕ್ಷಣ ಮತಾಂತರ ತಡೆಯುವ ಸಲುವಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಮಸೂದೆ ಈಗಾಗಲೇ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದಿದ್ದು, ಜನವರಿ ಅಥವಾ ಫೆಬ್ರುವರಿಯಲ್ಲಿ ನಡೆಯುವ ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲೂ ಮಸೂದೆ ಅನುಮೋದನೆ ಪಡೆಯಲು ಸರ್ಕಾರ ಪ್ರಯತ್ನ ನಡೆಸಲಿದೆ. “ಈ ಕಾನೂನು ಹಲವು ವರ್ಷಗಳಿಂದ ಸೊರಗಿತ್ತು. ಮುಂದಿನ ದಿನಗಳಲ್ಲಿ ಇದನ್ನು ಕಾನೂನು ಆಗಿ ಮಾಡುವ ಜತೆಗೆ ಇದರ ಪರಿಣಾಮಕಾರಿ ಜಾರಿಗೆ ವಿಶೇಷ ಕಾರ್ಯಪಡೆಯನ್ನೂ ರಚಿಸಲಾಗುವುದು” ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಈ ಕಾಯ್ದೆ ರದ್ದುಪಡಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬಗ್ಗೆ ಪ್ರಸ್ತಾಪಿಸಿದ ಬೊಮ್ಮಾಯಿ, “ಅವರ ಕನಸು ನನಸಾಗದು. ಇದರಿಂದ ನೀವು ಅಧಿಕಾರಕ್ಕೆ ಬರಲಾಗದು. ಮತಾಂತರ ತಡೆ ಕಾಯ್ದೆ ಜನರಿಗೆ ತಮ್ಮ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ಇದೇ ಅಂತಿಮವಾಗಿ ಉಳಿಯುವುದು” ಎಂದು ಹೇಳಿದರು.
ಆಂಜನೇಯನ ಜನ್ಮಸ್ಥಾನ ಎಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇದನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ರಾಮಮಂದಿರ ಉದ್ಘಾಟನೆ ಬಳಿಕ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.