ಮೇಕೆದಾಟು ಯೋಜನೆಯ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲಿಸಲು _ಕೆ. ಪಿ ಸಿ ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಕರೆ.

 

 

 

ತುಮಕೂರು, ಡಿ. 27- ಮೇಕೆದಾಟು ಯೋಜನೆ ರಾಜ್ಯದ ಜ್ವಲಂತ ಸಮಸ್ಯೆಯಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ರೈತರ ಬದಕನ್ನು ಉಳಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜ. 9 ರಿಂದ 19ರ ವರೆಗೆ ಕಾಂಗ್ರೆಸ್ ಪಕ್ಷ ಮೇಕೆದಾಟಿನಿಂದ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದರು.

 

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷದವರು, ಸಾಹಿತಿಗಳು, ಚಿತ್ರರಂಗದವರು, ಸಂಘ ಸಂಸ್ಥೆಗಳವರು ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು. .

 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಇಂದು ಆದಿಚುಂಚನಗಿರಿ ಮಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಿ ಬಂದಿದ್ದೇವೆ. ಈ ಪಾದಯಾತ್ರೆ ಕೇವಲ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಇದೊಂದು ರಾಜ್ಯದ ಹಿತಕ್ಕಾಗಿ ನಡೆಯುತ್ತಿರುವ ಚಳವಳಿ. ಹಾಗಾಗಿ ಈ ಹೋರಾಟದಲ್ಲಿ ಎಲ್ಲ ಮಠಾಧೀಶರು, ಧಾರ್ಮಿಕ ಮುಖಂಡರುಗಳು ಸಹ ಭಾಗವಹಿಸುವಂತೆ ಮನವಿ ಮಾಡಿದರು.

 

ಕುಡಿಯುವ ನೀರಿನ ಯೋಜನೆಗೆ ಯಾವುದೇ ರಾಜ್ಯಗಳ ಎನ್ಓಸಿ ಅಗತ್ಯವಿಲ್ಲ. ಪರಿಸರ ಇಲಾಖೆ ಅನುಮತಿ ನೀಡಿದರೆ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಹಾಗಾಗಿ ಕೇಂದ್ರದ ಪರಿಸರ ಇಲಾಖೆ ಈ ಯೋಜನೆಗೆ ಆದಷ್ಟು ಬೇಗ ಅನುಮತಿ ನೀಡಿ ಕಾಮಗಾರಿ ಆರಂಭಿಸಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. .

 

ಮೇಕೆದಾಟು ಜಲಾಶಯ ನಿರ್ಮಾಣ ಮಾಡಲು ನಮ್ಮ ಸರ್ಕಾರ ಡಿಪಿಆರ್ ಸಿದ್ದಪಡಿಸಿತ್ತು. ನಾವು ಮಾಡಿದ್ದ ಡಿಪಿಆರ್ ಒಪ್ಪಿಕೊಂಡು ಅನುಮತಿ ಕೊಟ್ಟಿದ್ದರು. ಈ ಅಣೆಕಟ್ಟೆ ನಿರ್ಮಾಣಕ್ಕೆ 9 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಸ್ಟಿಮೇಟ್ ಅಂತಿಮವಾಗಿದೆ. ಇಷ್ಟಾದರೂ ಕೇಂದ್ರದ ಪರಿಸರ ಇಲಾಖೆ ಅನುಮತಿ ಮಾತ್ರ ದೊರೆತಿಲ್ಲ ಎಂದರು.

 

ಮೇಕೆದಾಟ ಅಣೆಕಟ್ಟು ನಿರ್ಮಾಣವಾದರೆ ಈ ನೀರಿನಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಆದರೆ ನಮ್ಮ ರಾಜ್ಯದ ರೈತರಿಗೆ ಮೇಕೆದಾಟು ನೀರಿನಿಂದ ಅನುಕೂಲವಾಗುವುದಿಲ್ಲ. ಬದಲಾಗಿ ತಮಿಳುನಾಡು ರಾಜ್ಯಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು.

 

ಬೆಂಗಳೂರಿನ ಜನತೆಗೆ ಈ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ. ಇದು ರಾಜಕೀಯ ಚಳವಳಿಯಲ್ಲ. ರಾಜ್ಯ ಮತ್ತು ದೇಶಕ್ಕೆ ಅನುಕೂಲವಾಗುವಂತಹ ಹೋರಾಟವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬಹುದು ಎಂದರು.

 

ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ದೇಶದ ಐಕ್ಯತೆಗಾಗಿ ಕಾಂಗ್ರೆಸ್ ನಾಯಕರುಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಎಂದೂ ಸಹ ಸ್ವಹಿತಾಸಕ್ತಿಗಾಗಿ ಹೋರಾಟ ಮಾಡಿಲ್ಲ ಎಂದ ಅವರು, ಈ ಪಾದಯಾತ್ರೆ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

 

ಇದು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು, ನೋಂದಣಿ ಆಗಬೇಕಿರುವುದು ಅವಶ್ಯಕ, ಎಲ್ಲ ಮಠಾಧೀಶರು, ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಬೆಂಗಳೂರಿನ ಎರಡು ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದರು.

 

ಇದು ಪಕ್ಷದ ಕಾರ್ಯಕ್ರಮವಾದರೂ ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಪಕ್ಷಾತೀತವಾಗಿಯೇ ಹೋರಾಟದ ಲೋಗೋ ರೂಪಿಸಲಾಗಿದೆ ಎಂದ ಅವರು, ನಮ್ಮ ಪಕ್ಷದ ಎಲ್ಲ ಮುಖಂಡರು ಇದರಲ್ಲಿ ಭಾಗವಹಿಸುತ್ತಾರೆ, ಸಿದ್ದರಾಮಯ್ಯ ಅವರು ಪಾದಯಾತ್ರೆಯಲ್ಲಿ ಇರುತ್ತಾರೆ ಎಂದು ತಿಳಿಸಿದರು.

 

ಈ ಪಾದಯಾತ್ರೆಯಲ್ಲಿ ಭಾಗವಹಿಸುವವರು ಆನ್‌ಲೈನ್ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಜತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮುಖೇನ ಫೊಟೋಗಳನ್ನು ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಪಕ್ಷದ ವತಿಯಿಂದ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದರು.

 

ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್, ಜನರ ಮೇಲೆ ಹೊರೆಯಾಗದಂತೆ ಮಾಡಿಕೊಳ್ಳಲಿ. ವಿಧಾನ ಸೌಧದಲ್ಲಿ ಜನಪ್ರತಿನಿಧಿಗಳೆಲ್ಲ ಸೇರಿಕೊಂಡು ನಿರ್ಣಯ ಕೈಗೊಂಡು ಮುಖ್ಯಮಂತ್ರಿಗಳಿಗೆ ಬೆಂಬಲ ಸೂಚಿಸಿದ್ದೇವೆ. ಮುಖ್ಯಮಂತ್ರಿಗಳ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

 

ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಅವರೇ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದಾರೆ, ಹಸಿರು ಪೀಠದ ಒಪ್ಪಿಗೆ, ಹಣಕಾಸು ಇಲಾಖೆ ಅನುಮೋದನೆ ಪಡೆಯಲು ರಾಜ್ಯದ 26 ಸಂಸದರು ಒತ್ತಡ ಹಾಕಬೇಕು. ಆ ಕೆಲಸವನ್ನು ಮಾಡಲು ಆಗುವುದಿಲ್ಲ ಎಂದರೆ ಅವರನ್ನೇಕೆ ಗೆಲ್ಲಿಸಬೇಕು ಎಂದು ಅವರು ಪ್ರಶ್ನಿಸಿದರು.

 

ಸದಸ್ಯತ್ವ ನೋಂದಣಿಗೆ ಆದ್ಯತೆ ನೀಡಿ

 

ಕಾಂಗ್ರೆಸ್ ಪಕ್ಷದ ನೋಂದಣಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಅವಕಾಶವಿದ್ದು, ರಾಜ್ಯದಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಕಾರ್ಯಕರ್ತರ ಮಧ್ಯೆ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗಿತ್ತು ಎಂದು ತಿಳಿಸಿದರು.

 

ರಾಜ್ಯದಲ್ಲಿ ಸಂಭ್ರಮದ ರೀತಿಯಲ್ಲಿ ಸದಸ್ಯತ್ವ ನೋಂದಣಿ ನಡೆಯುತ್ತಿದ್ದು, ಆನ್‌ಲೈನ್ ನೋಂದಣಿ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಿಗೆ ಡಿ. 27 ರಂದು ನೋಂದಣಿ ಬಗ್ಗೆ ಜಾಗೃತಿ ಕಾರ್ಯಾಗಾರ ನಡೆಯಲಿದೆ. ಸಕ್ರಿಯ ಕಾರ್ಯಕರ್ತರ ನೋಂದಣಿಗೆ ಆದ್ಯತೆ ನೀಡಲಾಗಿದ್ದು, ಪಕ್ಷದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ಯಾವುದೇ ಕಾರಣಕ್ಕೂ ಸಮಯ ಮುಂದೂಡದೇ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಹೇಳಿದರು.

 

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 2022ರ ಸೆ. 22 ರಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಕೆಪಿಸಿಸಿಗೆ ನೀಡಿರುವ ಸೂಚನೆಯಂತೆ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರ ನೋಂದಣಿ ಮಾಡಿಸುವುದಾಗಿ ಭರವಸೆ ನೀಡಿದರು.

 

ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಭದ್ರತೆ ಸಿಗಲಿದ್ದು, ರಾಜ್ಯ ಸರ್ಕಾರ ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದರೂ ಸಹ ಒಪ್ಪಿಗೆ ಪಡೆಯಲು ಮುಂದಾಗುತ್ತಿಲ್ಲ. ಬಿಜೆಪಿಗೆ ಜನರ ಹಿತ ಬೇಕಾಗಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಐದು ವರ್ಷಗಳಲ್ಲಿ 58 ಸಾವಿರ ಕೋಟಿ ರೂ.ಗಳನ್ನು ನೀರಾವರಿಗಾಗಿ ಖರ್ಚು ಮಾಡಿತ್ತು. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

 

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ವೆಂಕಟರಮಣಪ್ಪ, ಡಾ. ರಂಗನಾಥ್, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ, ಟಿ.ಬಿ. ಜಯಚಂದ್ರ, ಕೆ. ಷಡ‌ಕ್ಷರಿ, ಎಸ್. ಷಫಿಅಹಮದ್, ಡಾ. ರಫೀಕ್ ಅಹಮದ್, ಕೆಪಿಸಿಸಿಯ ಪ್ರೊ. ರಾಧಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮುರುಳೀಧರ ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!