ಲಕ್ನೊ ಐಪಿಎಲ್ ಫ್ರಾಂಚೈಸಿಯ ಸಲಹೆಗಾರರಾಗಿ ಗೌತಮ್ ಗಂಭೀರ್ ನೇಮಕ
ಹೊಸದಿಲ್ಲಿ: ಭಾರತದ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಮಾಜಿ ನಾಯಕ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಲಕ್ನೊ ಐಪಿಎಲ್ ತಂಡದ ಸಲಹೆಗಾರರಾಗಿ ನೇಮಕವಾಗಿದ್ದಾರೆ.
ಫ್ರಾಂಚೈಸಿಯ ನೂತನ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ಘೋಷಣೆಯ ಬೆನ್ನಿಗೆ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಸಂಜೀವ್ ಗೊಯೆಂಕಾ ಒಡೆತನದ ಆರ್ಪಿಎಸ್ಐ ಗ್ರೂಪ್ ಮಾಡಿದ ಎರಡನೇ ಪ್ರಮುಖ ಘೋಷಣೆ ಇದಾಗಿದೆ.
2016 ಹಾಗೂ 17ರಲ್ಲಿ ಐಪಿಎಲ್ನ ಪುಣೆ ಸೂಪರ್ಜಯಂಟ್ ತಂಡದ ಫ್ರಾಂಚೈಸಿ ಪಡೆದಿದ್ದ ಕೋಲ್ಕತಾ ಮೂಲದ ಕಂಪೆನಿಯು ಈ ಬಾರಿ ರೂ.7,090 ಕೋಟಿಯ ಭಾರೀ ಮೊತ್ತಕ್ಕೆ ಲಕ್ನೊ ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಇನ್ನೂ ಹೆಸರಿಡದ ಲಕ್ನೊ ತಂಡಕ್ಕೆ ಗೌತಮ್ ಗಂಭೀರ್ ಅವರನ್ನು ಗೊಯೆಂಕಾ ಬರ ಮಾಡಿಕೊಂಡಿದ್ದಾರೆ.
58 ಟೆಸ್ಟ್, 147 ಏಕದಿನ ಹಾಗೂ 37 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಗಂಭೀರ್ ಅವರು 2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ಪುರುಷರ ತಂಡದ ಸದಸ್ಯರಾಗಿದ್ದರು. ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕೆಕೆಆರ್ ತಂಡಗಳ ಪರ ಆಡಿರುವ ಅವರು 154 ಪಂದ್ಯಗಳಲಿ 4,217 ರನ್ ಗಳಿಸಿದ್ದರು. ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2012 ಹಾಗೂ 2014ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಜಯಿಸಿತ್ತು.