ರಾಯಣ್ಣ-ಶಿವಾಜಿ ಪ್ರತಿಮೆಗೆ ಅವಮಾನ: ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

ರಾಯಣ್ಣ-ಶಿವಾಜಿ ಪ್ರತಿಮೆಗೆ ಅವಮಾನ: ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಹಾಗೂ ಎಂ.ಇ.ಎಸ್. ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟ ಬೆನ್ನಲ್ಲೆ ಬೆಂಗಳೂರಿನಲ್ಲಿ ಶಿವಾಜಿ ಪತ್ರಿಮೆಗೆ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪತ್ರಿಮೆಗೆ ಕಿಡಿಗೇಡಿಗಳು ಅವಮಾನ ಮಾಡಿದ ಘಟನೆ ನಡೆದಿದ್ದು, ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.

 

ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ವೃತ್ತದ ಬಳಿ ಶಿವಾಜಿ ಪತ್ರಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವುದನ್ನು ಖಂಡಿಸಿ ಶುಕ್ರವಾರ ರಾತ್ರಿ ಬೆಳಗಾವಿಯಲ್ಲಿ ಎಂ.ಇ.ಎಸ್.ನ ನೂರಾರು ಕಾರ್ಯಕರ್ತರು ಏಕಾಏಕಿ ಪ್ರತಿಭಟನೆ ನಡೆಸಿದರು.

 

ಈ ವೇಳೆ ಕಲ್ಲು ತೂರಾಟ ನಡೆದಿದ್ದು ಪೊಲೀಸರು, ವಿಧಾನಮಂಡಲ ಅಧಿವೇಶನಕ್ಕೆ ಆಗಮಿಸಿದ್ದ ಸರಕಾರಿ ಅಧಿಕಾರಿಗಳ ವಾಹನಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.

 

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬೆಳಗಾವಿ ಕಲಂ 144ರ ಅನ್ವಯ ನಿಷೇಧಾಜ್ಞೆ ವಿಧಿಸಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಎಂ.ಇ.ಎಸ್ ಹಾಗೂ ಕನ್ನಡ ಪರ ಸಂಘಟನೆಗಳು ಪರಸ್ಪರ ಪರ-ವಿರೋಧ ಪ್ರತಿಭಟನೆಗಳನ್ನು ಆರಂಭಿಸಿವೆ.

 

ಎಂ.ಇ.ಎಸ್. ಕಾರ್ಯಕರ್ತರು ನಗರದಲ್ಲಿ ಪತ್ರಿಭಟನೆ ನಡೆಸಿ ಶಿವಾಜಿ ಪತ್ರಿಮೆಗೆ ಹಾಲಿನ ಅಭಿಷೇಕ ನಡೆಸಿದ್ದರೆ, ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳು ಎಂ.ಇ.ಎಸ್. ಕೃತ್ಯ ಖಂಡಿಸಿ ಚೆನ್ನಮ್ಮ ವೃತ್ತದಲ್ಲಿ ಪತ್ರಿಭಟನೆ ನಡೆಸಿ, ಸಂಗೊಳ್ಳಿ ರಾಯಣ್ಣ ಪತ್ರಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿವೆ. ಅಲ್ಲದೇ, ಎಂ.ಇ.ಎಸ್.ನ ಅಟಾಟೋಪ ಖಂಡಿಸಿ ನಾಳೆಯಿಂದ ಪ್ರತಿಭಟನೆಯನ್ನ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.

 

ಕನ್ನಡಿಗರನ್ನು ಕೆಣಕುವ ಎಂ.ಇ.ಎಸ್.ನ ಉದ್ಧಟತನಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆ ಕಡಿವಾಣ ಹಾಕದಿದ್ದರೆ, ಮುಂದೆ ಆಗುವಂತಹ ಎಲ್ಲಾ ಅವಘಡಗಳಿಗೆ ರಾಜ್ಯ ಸರಕಾರವೆ ಹೊಣೆಯಾಗಲಿದೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.

 

ಈ ಮಧ್ಯೆ ಡಿ.20ರವರೆಗೆ ಕಲಂ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

 

ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಘಟನೆಗೆ ಸಂಬಂಧ 1, ಸರಕಾರಿ ವಾಹನಗಳಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 27 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ನಗರ ಪೋಲಿಸ್ ಆಯುಕ್ತ ಕೆ.ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.

 

ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೋಲಿಸ್ ಬಂದೋಬಸ್ತ್ ಮತ್ತಷ್ಟು ಹೆಚ್ಚಿಸಲಾಗಿದೆ. ಸದ್ಯ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

 

ನಗರದಲ್ಲಿ ನಿನ್ನೆ ರಾತ್ರಿ ಪುಂಡಾಟ ಮೆರೆದ ಎಂ.ಇ.ಎಸ್. ಕಾರ್ಯಕರ್ತರ ಕೃತ್ಯ ಖಂಡಿಸಿ, ಕನ್ನಡ ಪರ ಸಂಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಅಲ್ಲದೇ, ಕನ್ನಡ ವಿರೋಧಿ ಚಟುವಟಿಕೆ ನಡೆಸುವ ಎಂ.ಇ.ಎಸ್ ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿವೆ.

 

ಮುಖಂಡರ ಬಂಧನ: ಬೆಳಗಾವಿ ನಗರದಲ್ಲಿ ಪಾದಯಾತ್ರೆ ಮತ್ತು ಪತ್ರಿಭಟನೆ ನಡೆಸಲು ಮುಂದಾಗಿದ್ದ ಕನ್ನಡ ಪರ ಸಂಘಟನೆಗಳ ಹಲವು ಮುಖಂಡರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದಾರೆ.

 

ವ್ಯಾಪಕ ಖಂಡನೆ: ಸಂಗೊಳ್ಳಿ ರಾಯಣ್ಣ ಪತ್ರಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳ ಕೃತ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು ಸೇರಿದಂತೆ ಇನ್ನಿತರ ಗಣ್ಯರು ಖಂಡಿಸಿದ್ದಾರೆ.

 

ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರ ಬದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋದು ಅಲ್ಲಿನ ಸರಕಾರದ ಹೊಣೆಯಾಗಿದೆ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಮತ್ತು ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡಬಾರದು ಎಂದು ಮುಖಂಡರು ಕೋರಿದ್ದಾರೆ.

 

ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನದ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕೆಡವಿ ವಿರೂಪಗೊಳಿಸಿದ ಎಂ.ಇ.ಎಸ್. ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಗೂಂಡಾಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲು ಪೊಲೀಸರಿಗೆ ಆದೇಶ ನೀಡಬೇಕು. ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ ಸಂಯಮದಿಂದ, ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಬೇಕೆಂದು ಮನವಿ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

 

ವಾಹನಗಳ ಮೇಲೆ ತೂರಾಟ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಹಿನ್ನೆಲೆ ಬೆಳಗಾವಿಯಲ್ಲಿ ಕಲಂ 144 ಅನ್ವಯ ನಿಷೇಧಾಜ್ಣೆ ಜಾರಿಗೊಳಿಸಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದು, ವಾಹನಗಳಿಗೆ ಹಾನಿ ಹಾಗೂ ರಾಯಣ್ಣ ಪ್ರತಿಮೆ ಭಗ್ನ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ.

-ಕೆ.ತ್ಯಾಗರಾಜನ್ ಬೆಳಗಾವಿ ನಗರ ಪೊಲೀಸ್ ಆಯುಕ್ತ

Leave a Reply

Your email address will not be published. Required fields are marked *

You cannot copy content of this page

error: Content is protected !!