ಹೆಲಿಕಾಪ್ಟರ್ ಪತನ ಕುರಿತು ಪ್ರತಿಯೊಂದೂ ಕೋನದಲ್ಲಿ ತನಿಖೆ: ವಾಯುಪಡೆ ಮುಖ್ಯಸ್ಥ
ಹೈದರಾಬಾದ್ : ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದ ಬಗ್ಗೆ ತ್ರಿಪಡೆ ವಿಚಾರಣಾ ಸಮಿತಿಯು ನಡೆಸುತ್ತಿರುವ ತನಿಖೆಯು ನ್ಯಾಯಯುತ ಪ್ರಕ್ರಿಯೆಯಾಗಿದ್ದು,ಘಟನೆಯ ಪ್ರತಿಯೊಂದೂ ಕೋನವನ್ನು ತನಿಖೆಗೊಳಪಡಿಸುವಂತೆ ಅದಕ್ಕೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ ರಾಮ ಚೌಧರಿ ಅವರು ಶನಿವಾರ ತಿಳಿಸಿದರು.
ಹೈದರಾಬಾದ್ ಸಮೀಪದ ದುಂಡಿಗಲ್‌ನಲ್ಲಿ ಏರ್ಫೋರ್ಸ್ ಅಕಾಡೆಮಿಯಲ್ಲಿ ಕಂಬೈನ್ಡ್ ಗ್ರಾಜ್ಯುಯೇಶನ್ ಪರೇಡ್‌ನ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ತನಿಖೆಯು ಪೂರ್ಣಗೊಳ್ಳಲು ಇನ್ನೂ ಕೆಲವು ವಾರಗಳನ್ನು ತೆಗೆದುಕೊಳ್ಳಲಿದೆ. ಅದೊಂದು ಸಮಗ್ರವಾದ ಪ್ರಕ್ರಿಯೆಯಾಗಿರುವುದರಿಂದ ಸಮಿತಿಯು ಕಂಡುಕೊಳ್ಳುವ ಯಾವುದೇ ವಿಷಯದ ಬಗ್ಗೆ ಪೂರ್ವಭಾವಿಯಾಗಿ ಮಾತನಾಡಲು ತಾನು ಬಯಸುವುದಿಲ್ಲ. ಪ್ರತಿಯೊಂದೂ ಕೋನದಲ್ಲಿ ತನಿಖೆ ನಡೆಸುವಂತೆ ಮತ್ತು ಏನು ತಪ್ಪಾಗಿರಬಹುದು ಎಂಬ ಬಗ್ಗೆ ಪ್ರತಿಯೊಂದೂ ಅಂಶವನ್ನು ಪರಿಶೀಲಿಸುವಂತೆ ಹಾಗೂ ಸೂಕ್ತ ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ಸಮಿತಿಗೆ ನಿರ್ದೇಶ ನೀಡಲಾಗಿದೆ. ಪತನಕ್ಕೆ ಕಾರಣ ಏನಾಗಿತ್ತು ಮತ್ತು ಯಾವ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಯಾವುದೇ ಅವಸರದ ಪ್ರಕಟಣೆಯನ್ನು ತಾನು ನೀಡುವುದಿಲ್ಲ. ತನಿಖೆಯು ಮುಗಿಯುವವರೆಗೆ ಕೆಲವು ವಾರಗಳ ಕಾಲ ಕಾಯಬೇಕಿದೆ ಎಂದು ತಿಳಿಸಿದರು.
ಡಿ.8ರಂದು ಕೂನೂರು ಬಳಿ ಭಾರತೀಯ ವಾಯಪಡೆಯ ಹೆಲಿಕಾಪ್ಟರ್ ಪತನಗೊಂಡು ಸಂಭವಿಸಿದ್ದ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್,ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಸಶಸ್ತ್ರ ಪಡೆಗಳ ಇತರ 12 ಸಿಬ್ಬಂದಿಗಳು ಮೃತಪಟ್ಟಿದ್ದರು.
ಬೆಳಿಗ್ಗೆ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಪಾಸಿಂಗ್ ಔಟ್ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಚೌಧರಿ,ಯುದ್ಧದ ಸ್ವರೂಪವು ಮೂಲಭೂತ ಬದಲಾವಣೆಗಳಿಗೆ ಒಳಗಾಗುತ್ತಿದೆ. ಭಾರತದ ಭದ್ರತಾ ವ್ಯವಸ್ಥೆಯು ಬಹುಮಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದು,ಇದಕ್ಕಾಗಿ ನಾವು ಬಹುಕ್ಷೇತ್ರೀಯ ಸಾಮರ್ಥ್ಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.
ರಫೇಲ್ ಯುದ್ಧವಿಮಾನಗಳು,ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು ವಿವಿಧ ಅತ್ಯಾಧುನಿಕ ವ್ಯವಸ್ಥೆಗಳ ಸೇರ್ಪಡೆಯೊಂದಿಗೆ ಭಾರತಿಯ ವಾಯಪಡೆಯು ಅತ್ಯಂತ ಶಕ್ತಿಯುತ ಪಡೆಯಾಗಿ ಪರಿವರ್ತನೆಗೊಳ್ಳುವ ಹಂತದಲ್ಲಿದೆ ಎಂದೂ ಅವರು ತಿಳಿಸಿದರು.