ಡಿ.೨೦ರಿಂದ ೨೪ರವರೆಗೆ ಐದು ದಿನಗಳ ನಾಟಕಮನೆ ರಂಗೋತ್ಸವ

ಡಿ.೨೦ರಿಂದ ೨೪ರವರೆಗೆ ಐದು ದಿನಗಳ ನಾಟಕಮನೆ ರಂಗೋತ್ಸವ.

 

ತುಮಕೂರು:ಕಳೆದ ೨೪ ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪ್ರಯೋಗದಾಟಗಳ ರಂಗ ಕೇಂದ್ರ ನಾಟಕಮನೆ ತುಮಕೂರು ಡಿಸೆಂಬರ್ ೨೦ ರಿಂದ ೨೪ರ ವರೆಗೆ ಐದು ದಿನಗಳ ನಾಟಕಮನೆ ರಂಗೋತ್ಸವ-೨೦೨೧ನ್ನು ತುಮಕೂರಿನ ಬಾಳನಕಟ್ಟೆಯಲ್ಲಿರುವ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ ಎಂದು ನಾಟಕಮನೆ ತುಮಕೂರು ಇದರ ಟ್ರಸ್ಟಿ ನಾಟಕಮನೆ ಮಹಾಲಿಂಗು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹೆಸರಾಂತ ರಂಗಕರ್ಮಿ ಬಿ.ವಿ.ಕಾರಂತರಿoದ ನಾಟಕಮನೆ ತುಮಕೂರು ಎಂಬ ನಾಮಾಂಕಿತದಿoದ ಉದಯವಾದ ನಾಟಕಮನೆ ನಿರಂತರವಾಗಿ ರಂಗಚಟುವಟಿಕೆಯಲ್ಲಿ ತೊಡಗಿದ್ದು, ರಂಗಶಿಬಿರ, ರಂಗಭೂಮಿ ಕುರಿತ ಕಮ್ಮಟ, ವಿಚಾರ ಸಂಕಿರಣ, ಕಾರ್ಯಾಗಾರ, ರಂಗತರಬೇತಿ ಶಿಬಿರಗಳನ್ನು ಆಯೋಜಿಸುವುದರ ಜೊತೆಗೆ, ಹೆಸರಾಂತರ ನಿರ್ದೇಶಕರ ನಾಟಕಗಳ ಜೊತೆಗೆ,ಹೊಸ ಕಲಾವಿದರು,ನಿರ್ದೇಶಕರುಗಳ ನಾಟಕಗಳ ಪ್ರಯೋಗಕ್ಕೆ ವೇದಿಕೆ ಕಲ್ಪಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ತಮ್ಮದೆ ತಂಡ ಕಟ್ಟಿಕೊಂಡು ಐತಿಹಾಸಿಕ,ಪೌರಾಣಿಕ, ಸಾಮಾಜಿಕ, ಹಾಸ್ಯ, ವಿಡಂಬನಾತ್ಮಕ, ವಿನೋಧಾತ್ಮಕ ನಾಟಕಗಳನ್ನು ನಾಡಿನೆಲ್ಲೆಡೆ ಪ್ರದರ್ಶನ ಮಾಡುವ ಮೂಲಕ ರಂಗಭೂಮಿಗೆ ಸಮರ್ಪಣೆ ಮಾಡಿಕೊಂಡಿದೆ ಎಂದರು.

ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ಐದು ದಿನಗಳ ನಾಟಕಮನೆ ರಂಗೋತ್ಸವವನ್ನು ಡಿಸೆಂಬರ್ ೨೦ರ ಸೋಮವಾರದಿಂದ ಡಿಸೆಂಬರ್ ೨೪ರ ಶುಕ್ರವಾರದವರೆಗೆ ಹಮ್ಮಿಕೊಳ್ಳ ಲಾಗಿದೆ.ಡಿಸೆಂಬರ್ ೨೦ರ ಸೋಮವಾರ ಸಂಜೆ ೬:೩೦ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದ್ದು,ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಮ್ ನಾಟಕಮನೆ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಸ್ತುತ ಅಧ್ಯಕ್ಷರಾದ ಪ್ರೊ.ಭೀಮಸೇನ್ ವಹಿಸಲಿದ್ದಾರೆ.ಕಲಾಪೋಷಕರಾದ ಸಿ.ವಿ.ಮಹದೇವಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ರಾಜೇಂದ್ರ ಕಾರಂತರ ರಚನೆಯ, ಮಂಜು ಸಿರಿಗೇರಿ ಅವರ ನಿರ್ದೆಶನದಲ್ಲಿ ಮುದ್ದಣ್ಣನ ಪ್ರಮೋಷನ್ ಪ್ರಸಂಗ ವೈನೋದಿಕ ನಾಟಕ ಪ್ರದರ್ಶನ ಗೊಳ್ಳಲಿದೆ.

ಡಿಸೆಂಬರ್ ೨೧ರ ಮಂಗಳವಾರ ಸಂಜೆ ೬:೩೦ಕ್ಕೆ ಆದಿಕವಿ ಪಂಪನ ಆದಿಪುರಾಣವನ್ನಾಧರಿಸಿದ ಬಾಹುಬಲಿ ವಿಜಯಂ ಎಂಬ ಐತಿಹಾಸಿಕ ನಾಟಕವನ್ನು ಭೀಮೇಶ್ ಹೆಚ್.ಎನ್.ಅವರ ನಿರ್ದೇಶನದಲ್ಲಿ ಮೂಡಿಬರಲಿದೆ.

ಡಿಸೆಂಬರ್ ೨೨ರ ಬುಧವಾರ ಸಂಜೆ ೬:೩೦ಕ್ಕೆ ಬೀಚಿಯವರ ಹಾಸ್ಯ ಬರಹಗಳನ್ನು ಆಧರಿಸಿದ ಬೀಚಿ ರಸಾಯನ ಎಂಬ ಹಾಸ್ಯ ನಾಟಕ ಎನ್.ಸಿ.ಮಹೇಶ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಡಿಸೆಂಬರ್ ೨೩ರ ಗುರುವಾರ ಸಂಜೆ ೬:೩೦ಕ್ಕೆ ರಾಷ್ಟçಕವಿ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಎನ್.ಎಸ್.ಡಿ.ಪದವಿಧರೆ ಬಿ.ಸವಿತ ಅವರ ನಿರ್ದೇಶನದಲ್ಲಿ ಪ್ರಯೋಗಗೊಳ್ಳಲಿದೆ.

ಡಿಸೆಂಬರ್ ೨೪ರ ಶುಕ್ರವಾರ ಸಂಜೆ ೬:೩೦ಕ್ಕೆ ನಾಟಕಮನೆ ನಾಟಕೋತ್ಸವ-೨೦೨೧ರ ಸಮಾರೋಪ ಸಮಾರಂಭ ಜರುಗಲಿದ್ದು, ದೇಶಿ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಸಮಾರೋಪ ನುಡಿಗಳನ್ನಾಡಲಿದ್ದಾರೆ.ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು,ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಆಯುಕ್ತರಾದ ಶ್ರೀಮತಿ ರೇಣುಕ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಶ್ರೀನಿವಾಸ್, ರಂಗನಿರ್ದೇಶಕ , ನಾಟಕಕಾರರಾದ ತುಮಕೂರು ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.

ಕಾರ್ಯಕ್ರಮದ ನಂತರ ಮೋಲಿಯರ್‌ನ ಜಂಟಲ್‌ಮನ್-ಮಾಮಾಮೋಶಿ ಎಂಬ ನಾಟಕದ ರಂಗಪ್ರಯೋಗ ನಡೆಯಲಿದೆ. ಈ ನಾಟಕವನ್ನು ಕನ್ನಡಕ್ಕೆ ಕೆ.ವಿ.ಸುಬ್ಬಣ್ಣ ಅನುವಾದಿಸಿದ್ದು, ಚೇತನ್ ತುಮಕೂರು ನಿರ್ದೇಶಿಸಿದ್ದಾರೆ. ಐದು ದಿನಗಳ ನಾಟಕಮನೆ ರಂಗೋತ್ಸವ-೨೦೨೧ಗೆ ಉಚಿತ ಪ್ರವೇಶವಿದ್ದು,ರಂಗಾಸಕ್ತರು,ಯುವಜನತೆ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ನಾಟಕಮನೆ ಟಸ್ಟಿ ನಾಟಕಮನೆ ಮಹಾಲಿಂಗು,ರoಗಕರ್ಮಿ ಮೆಳೇಹಳ್ಳಿ ದೇವರಾಜು ಮತ್ತು ಸಂಚಾಲಕ ಪ್ರಕಾಶ್ ಎನ್.ಆರ್. ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!