ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಜಿಲೆಟಿನ್ ಸ್ಪೋಟ 

ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಜಿಲೆಟಿನ್ ಸ್ಪೋಟ

 

 

ಕ್ರಷರ್ ಹಾಗೂ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಜಿಲಿಟಿನ್ ಕಡ್ಡಿ ಸ್ಫೋಟಗೊಂಡು ಮನೆಯಲ್ಲಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ತಾಲ್ಲೂಕಿನ.ಹೆಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯ ಹೊನ್ನುಡಿಕೆ ಬಳಿ ಇರುವ ಮಸ್ಕಲ್ ಗ್ರಾಮದ ಲಕ್ಷ್ಮೀಕಾಂತ್ ಎಂಬುವರ ಮನೆ ಜಿಲಿಟಿನ್ ಕಡ್ಡಿ ಸ್ಪೋಟಗೊಂಡು ಸಂಪೂರ್ಣ ಧ್ವಂಸವಾಗಿದ್ದು, ಮೇಲ್ಛಾವಣಿ ಸೀಟುಗಳು ನಾಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಜಿಲೆಟಿನ್ ಕಡ್ಡಿ ಸ್ಫೋಟದಿಂದ ಮನೆಯಲ್ಲಿದ್ದ ಲಕ್ಷ್ಮೀಕಾಂತ ಅವರ ಪತ್ನಿ ಸುವರ್ಣಮ್ಮ ಎಂಬುವರ ತಲೆಗೆ ಸೀಟಿನ ಚೂರುಗಳು ಅಪ್ಪಳಿಸಿರುವ ಪರಿಣಾಮ ಈಕೆ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳಿಪಾಳ್ಯದ ಬಳಿ ಶಾಲೆಯೊಂದರ ಕಾಂಪೊಂಡ್ ಅಡಿಪಾಯ ತೆಗೆಯಲು ಲಕ್ಷ್ಮೀಕಾಂತ್ ಒಪ್ಪಂದ ಮಾಡಿಕೊಂಡಿದ್ದು, ಪಾಯ ತೆಗೆಯುವಾಗ ಕಲ್ಲುಬಂಡೆ ಸಿಕ್ಕಿವೆ. ಈ ಬಂಡೆಯನ್ನು ಸಿಡಿಸಲೆಂದು ಜಿಲೆಟಿನ್ ಕಡ್ಡಿ ಬಳಸಿರುತ್ತಾನೆ. ಉಳಿದ ಜಿಲಿಟಿನ್ ಕಡ್ಡಿಗಳನ್ನು ಮನೆಗೆ ಕೊಂಡೊಯ್ದು ಇಟ್ಟಿದ್ದನೆನ್ನಲಾಗಿದೆ.

ಶೀಟು ಮನೆಯಾಗಿದ್ದರಿಂದ ಶೀಟಿನ ಮೇಲ್ಭಾಗದಲ್ಲಿ ಬೆಳಕು ಬರಲೆಂದು ಗ್ಲಾಸ್ ಅಳವಡಿಸಿದ್ದು, ಈ ಗ್ಲಾಸ್‌ನಿಂದ ಮನೆಯೊಳಗೆ ಬಿದ್ದ ಬಿಸಿಲಿನ ತಾಪಕ್ಕೆ ಜಿಲಿಟಿನ್ ಕಡ್ಡಿ ಕಾದು ಹೊಗೆ ಬಂದಿದೆ. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಮಕ್ಕಳು ಇದನ್ನು ಕಂಡು ಹೊರಗೆ ಓಡಿ ಬಂದಿದ್ದಾರೆ. ಇದಾದ ನಂತರ ಜಿಲಿಟಿನ್ ಕಡ್ಡಿ ಸ್ಫೋಟಗೊಂಡು ಮನೆ ಸಂಪೂರ್ಣ ಧ್ವಂಸಗೊಂಡಿದೆ.

ಶಿವಮೊಗ್ಗ ಹುಣಸೋಡು ದುರಂತ ಮಾಸುವ ಮುನ್ನವೇ ಜಿಲ್ಲೆಯ ಮಸ್ಕಲ್ ಗ್ರಾಮದಲ್ಲಿ ಜಿಲಿಟಿನ್ ಕಡ್ಡಿ ಸ್ಫೋಟಗೊಂಡು ಮನೆ ಧ್ವಂಸಗೊಂಡಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಘಟನೆ ನಡೆದ ಬಳಿಕ ಲಕ್ಷ್ಮೀಕಾಂತ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಶ್ರೀನಿವಾಸ್, ಕ್ಯಾತ್ಸಂದ್ರ ಸಿಪಿಐ ಚನ್ನೇಗೌಡ ಹಾಗೂ ಹೆಬ್ಬೂರು ಸಬ್‌ಇನ್ಸ್‌ಪೆಕ್ಟರ್ ದೇವಿಕಾದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಕ್ಷ್ಮೀಕಾಂತ ಅವರ ಮನೆಯ ಸುತ್ತಮುತ್ತ 200 ಮೀಟರ್ ನಿಷೇಧಾಜ್ಞೆ ಹೊರಡಿಸಿದ್ದು, ಮನೆಯಲ್ಲಿ ಇನ್ನು ಜಿಲಿಟಿನ್ ಕಡ್ಡಿಗಳು ಇರುವ ಬಗ್ಗೆ ಅನುಮಾನಗಳು ಮೂಡಿವೆ. ಮನೆಯ ಸುತ್ತ ಮುತ್ತ ಯಾರು ಬರಬಾರದು ಎಂದು ಪೋಲಿಸರು ನಿಷೇಧ ಹೊರಡಿಸಿದ್ದಾರೆ.

ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ತುಮಕೂರಿನ ಜನತೆ ಬೆಚ್ಚಿ ಬಿದ್ದಿದ್ದು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

ಶಾಲಾ ಆವರಣದಲ್ಲಿ ಇದ್ದ ಕಲ್ಲು ಸ್ಪೋಟಿಸಲು ಜಿಲೆಟಿನ್ ತರಲಾಗಿತ್ತು ಎಂದು ಕೆಲ ಸಾರ್ವಜನಿಕರು ತಿಳಿಸಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳ ಪೊಲೀಸರ ಸುಪರ್ದಿನಲ್ಲಿ ಇದ್ದು ಸೂಕ್ತ ಪೊಲೀಸ್ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!