ಭಾರತ, ಅಮೆರಿಕದಿಂದ ತೈಲ ಮೀಸಲು ಸಂಗ್ರಹ ಬಿಡುಗಡೆ ನಿರ್ಧಾರಕ್ಕೆ ಒಪೆಕ್ ಎದಿರೇಟು
ವಾಶಿಂಗ್ಟನ್: ಅಮೆರಿಕವು ತನ್ನ ಆಯಕಟ್ಟಿನ ಪೆಟ್ರೋಲಿಯಂ ಮೀಸಲು ಸಂಗ್ರಹದಿಂದ 5 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಭಾರತವು ತನ್ನ ತುರ್ತು ಬಳಕೆಗಾಗಿನ ದಾಸ್ತಾನಿನಿಂದ 50 ಲಕ್ಷ ಬ್ಯಾರೆಲ್ ಹಾಗೂ ಬ್ರಿಟನ್ 15 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಬಿಡುಗಡೆಗೊಳಿಸುವುದಾಗಿ ಈಗಾಗಲೇ ಪ್ರಕಟಿಸಿವೆ
ಪ್ರಮುಖ ತೈಲ ಉತ್ಪಾದಕ ದೇಶಗಳ ಒಕ್ಕೂಟವಾದ ಒಪೆಕ್ ಪೆಟ್ರೋಲಿಯಂ ಉತ್ಪಾದನೆಯನ್ನು ಹೆಚ್ಚಿಸಲು ನಿರಾಕರಿಸುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವು ಒಂದೇ ಸವನೆ ಏರಿಕೆಯನ್ನು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬೆಲೆಯೇರಿಕೆ ನಿಯಂತ್ರಿಸಲು ಅಮೆರಿಕ, ಭಾರತ, ಬ್ರಿಟನ್ ತಮ್ಮ ಕಚ್ಚಾ ತೈಲ ಮೀಸಲು ಸಂಗ್ರಹದ ಬಿಡುಗಡೆಗೆ ಮುಂದಾಗಿವೆ.
ಶೀಘ್ರದಲ್ಲೇ ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯ ಕೂಡಾ ತಮ್ಮ ಮೀಸಲು ಸಂಗ್ರಹಾಗಾರದಿಂದ ಕಚ್ಚಾ ತೈಲ ಬಿಡುಗಡೆಗೆ ನಿರ್ಧರಿಸಿದ್ದು, ಇದರೊಂದಿಗೆ ಒಟ್ಟಾರೆ 1 ಕೋಟಿಯಿಂದ 2 ಕೋಟಿ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ ಈ ಕ್ರಮದಿಂದಾಗಿ ಸೌದಿ ಆರೇಬಿಯಕ್ಕೆ ತೈಲ ಉತ್ಪಾದನೆಯನ್ನು ಏಕಪಕ್ಷೀಯವಾದ ಕಡಿತವನ್ನು ಮಾಡಲು ಸಾಧ್ಯವಾಗದು ಎನ್ನಲಾಗಿದೆ. ಈ ಮಧ್ಯೆ ಒಪೆಕ್ ಒಕ್ಕೂಟದ ಇತರರ ರಾಷ್ಟ್ರಗಳು ಕೂಡಾ ನವೆಂಬರ್ ತಿಂಗಳ ಆರಂಭದಲ್ಲಿ ಸಭೆ ಸೇರಿದ ಸಂದರ್ಭ,ತೈಲ ಉತ್ಪಾದನೆಯನ್ನು ಹೆಚ್ಚಿಸಲು ನಿರಾಕರಿಸಿದ್ದವು.
ಆದರೆ ಅಮೆರಿಕ, ಭಾರತ ಮತ್ತಿತರ ರಾಷ್ಟ್ರಗಳ ನಡೆಗೆ ಪ್ರತಿಕ್ರಿಯಿಸಿರುವ ಒಪೆಕ್ ಒಕ್ಕೂಟವು, ಜನವರಿ ಹಾಗೂ ಆದರ ನಂತರದ ತಿಂಗಳುಗಳಲ್ಲಿ ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರವನ್ನು ಮುಂದೂಡುವುದಾಗಿ ಎಚ್ಚರಿಕೆ ನೀಡಿವೆ. ಜನವರಿಯಲ್ಲಿ ತೈಲ ಉತ್ಪಾದನೆ ಕುರಿತ ಯೋಜನೆಯನ್ನು ರೂಪಿಸಲು ಒಪೆಕ್ ಒಕ್ಕೂಟವು ಡಿಸೆಂಬರ್ 2ರಂದು ಸಭೆ ಸೇರಲಿವೆ.
ಮೀಸಲು ದಾಸ್ತಾನಿಂದ ಅಮೆರಿಕ, ಭಾರತ ಮತ್ತಿತರ ರಾಷ್ಟ್ರಗಳು 6 ಕೋಟಿ ಕಚ್ಚಾ ತೈಲ ಬ್ಯಾರೆಲ್ ಬಿಡುಗಡೆಗೊಳಿಸುವುದರಿಂದ ತನ್ನ ಮೇಲಾಗುವ ಆರ್ಥಿಕ ಪರಿಣಾಮವನ್ನು ನಿಯಂತ್ರಿಸಲು ಒಪೆಕ್ ಜನವರಿ ಹಾಗೂ ಫೆಬ್ರವರಿಯಲ್ಲಿ ಅದು ಯೋಜಿಸಿದ್ದ ದಿನಂಪ್ರತಿ 4 ಲಕ್ಷ ತೈ ಬ್ಯಾರೆಲ್ ಹೆಚ್ಚುವರಿ ಕಚ್ಚಾ ತೈಲ ಉತ್ಪಾದಿಸುವುದನ್ನು ಕೈಬಿಡಬೇಕಾಗುತ್ತದೆ