ಧರ್ಮದ ಕಾರಣ ಶೇ 33ರಷ್ಟು ಮುಸ್ಲಿಮರು ಆಸ್ಪತ್ರೆಗಳಲ್ಲಿ ತಾರತಮ್ಯ ಎದುರಿಸಿದ್ದರು: ಆಕ್ಸ್ ಫಾಮ್ ಸಮೀಕ್ಷೆ
ಹೊಸದಿಲ್ಲಿ: ಆಸ್ಪತ್ರೆಗಳಲ್ಲಿ ತಮ್ಮ ಧರ್ಮದ ಕಾರಣದಿಂದ ತಾರತಮ್ಯಕಾರಿ ಧೋರಣೆಯನ್ನು ಅನುಭವಿಸಬೇಕಾಯಿತು ಎಂದು ಭಾರತದ ಶೇ 33ರಷ್ಟು ಮುಸ್ಲಿಮರು ಹೇಳಿದ್ದಾರೆಂದು ಎನ್‍ಜಿಒ ಆಕ್ಸ್ ಫಾಮ್ ಇಂಡಿಯಾ ನಡೆಸಿದ ಸಮೀಕ್ಷೆ ತಿಳಿಸಿದೆ ಎಂದು scroll.in ವರದಿ ಮಾಡಿದೆ.
ಈ ಸಮೀಕ್ಷೆಗಾಗಿ 28 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 3,890 ಜನರನ್ನು ಸಂಪರ್ಕಿಸಲಾಗಿತ್ತು. ಸಮೀಕ್ಷೆಯ ವರದಿ ಇಂದು ಬಿಡುಗಡೆಗೊಂಡಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಪರಿಶಿಷ್ಟ ಪಂಗಡಗಳ ಮಂದಿಯ ಪೈಕಿ ಶೇ 22ರಷ್ಟು ಮಂದಿ, ಪರಿಶಿಷ್ಟ ಜಾತಿಗಳ ಶೇ 15 ಹಾಗೂ ಇತರ ಹಿಂದುಳಿದ ವರ್ಗಗಳ ಶೇ 15ರಷ್ಟು ಮಂದಿ ತಾರತಮ್ಯ ಧೋರಣೆಯನ್ನು ಆಸ್ಪತ್ರೆಗಳಲ್ಲಿ ಎದುರಿಸಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2018ರಲ್ಲಿ ಸಿದ್ಧಪಡಿಸಿದ್ದ “ರೋಗಿಗಳ ಹಕ್ಕುಗಳ ಮಾರ್ಗಸೂಚಿ” ಯನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಪರಿಶೀಲಿಸಲು ಈ ಸಮೀಕ್ಷೆಯನ್ನು ಈ ವರ್ಷದ ಫೆಬ್ರವರಿಯಿಂದ ಎಪ್ರಿಲ್ ನಡುವೆ ನಡೆಸಲಾಗಿತ್ತು.
ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರ ಪೈಕಿ ಶೇ 35ರಷ್ಟು ಮಂದಿ ತಾವು ಪುರುಷ ವೈದ್ಯರಿಂದ ಯಾವುದೇ ಮಹಿಳಾ ಸಿಬ್ಬಂದಿಯ ಉಪಸ್ಥಿತಿಯಿಲ್ಲದೆ ದೈಹಿಕ ತಪಾಸಣೆಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆಂದು ವರದಿ ತಿಳಿಸಿದೆ. ನಿಯಮಗಳ ಪ್ರಕಾರ ಪುರುಷ ವೈದ್ಯರೊಬ್ಬರು ಒಬ್ಬ ಮಹಿಳಾ ರೋಗಿಯನ್ನು ತಪಾಸಣೆಗೊಳಪಡಿಸುವ ವೇಳೆ ಆ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿಯೂ ಇರಬೇಕಿದೆ.
ತಮ್ಮ ಕಾಯಿಲೆಯ ಸ್ವರೂಪ ತಿಳಿಸದೆ ಹಾಗೂ ವಿವರಿಸದೆ ವೈದ್ಯರು ತಮಗೆ ಪ್ರಿಸ್ಕ್ರಿಪ್ಶನ್ ನೀಡಿದ್ದಾರೆಂದು ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ 74ರಷ್ಟು ಮಂದಿ ಹೇಳಿದ್ದಾರೆ.
ರೋಗಿಗಳ ಹಕ್ಕುಗಳ ಕುರಿತಾದ ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಕ್ರಮಕೈಗೊಳ್ಳಬೇಕೆಂದು ಸಮೀಕ್ಷಾ ವರದಿ ಶಿಫಾರಸು ಮಾಡಿದೆ.